ಬೆಂಗಳೂರು : ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಇಂದಿನಿಂದ ವಿಮಾನ ಯಾನ ಸೇವೆ ಆರಂಭವಾಗಿದ್ದು, ಮೊದಲ ದಿನವೇ ಎಡವಟ್ಟು ಮಾಡಲಾಗಿದೆ.
ಹೌದು. ಪ್ರಯಾಣಿಕರಿಗೆ ಸೂಚನೆ ನೀಡುವ ಡಿಜಿಟಲ್ ಫಲಕದಲ್ಲಿ ಕನ್ನಡವನ್ನು ಕಡೆಗಣಿಸಿ ಹಿಂದಿ ಭಾಷೆಗೆ ಆದ್ಯತೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಜನರು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿ ಭಾಷೆಯ ಡಿಜಿಟಲ್ ಫಲಕದ ಫೋಟೋ ಹಂಚಿಕೊಂಡ ನೆಟ್ಟಿಗರು ಕನ್ನಡವನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. . ‘ಕನ್ನಡ ಇನ್ ಕರ್ನಾಟಕ’ ಎಂಬ ಹ್ಯಾಶ್ ಟಾಗ್ ಹಾಕಿ ಇಲ್ಲಿ ಹಿಂದಿ ಭಾಷೆಯ ಅಗತ್ಯವಿಲ್ಲ, ಇದನ್ನು ತೆಗೆಸಿ ಕನ್ನಡದಲ್ಲಿ ಹಾಕಿಸಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಇಂದಿನಿಂದ ಬೆಂಗಳೂರು- ಶಿವಮೊಗ್ಗ ನಡುವೆ ಲೋಹದ ಹಕ್ಕಿಗಳ ಹಾರಾಟ ಆರಂಭವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೊದಲ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮೂಲಕ ಭರ್ಜರಿ ಸ್ವಾಗತ ಕೋರಲಾಯಿತು. ಮೊದಲ ವಿಮಾನದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್, ಶಾಸಕ ಅರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಹರತಾಳು ಹಾಲಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸೇರಿ 72 ಮಂದಿ ಬಂದಿಳಿದರು.
ಬೆಳಗ್ಗೆ 9.50ಕ್ಕೆ ಹೊರಟ ಇಂಡಿಗೋ ಏರ್ ಲೈನ್ಸ್ ಗೆ ಸೇರಿದ ನಾಗರಿಕ ವಿಮಾನ ಬೆಳಗ್ಗೆ 10.45ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ 55 ನಿಮಿಷದಲ್ಲಿ ಶಿವಮೊಗ್ಗಕ್ಕೆ ಲ್ಯಾಂಡ್ ಆಗಿದೆ.