ಬೆಂಗಳೂರು: ರಾಜ್ಯದ 113 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಸಮೀಕ್ಷೆ ಮುಂದುವರೆದಿದ್ದು, ಇವುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಆಗಸ್ಟ್ ನಲ್ಲಿ ಭಾರಿ ಮಳೆ ಕೊರತೆಯಾಗಿರುವುದು ಇದೇ ಮೊದಲು. ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಿ ಬಬರ ಪೀಡಿತ ತಾಲೂಕುಗಳ ಘೋಷಣೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಬರ ಘೋಷಣೆಗೆ ಯಾವ ತಾಲೂಕುಗಳು ಅರ್ಹ ಎನ್ನುವುದನ್ನು ಗುರುತಿಸುವ ನಿಟ್ಟಿನಲ್ಲಿ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ಆಗಸ್ಟ್ 31ರೊಳಗೆ ಬೆಳೆ ನಷ್ಟದ ಮಾಹಿತಿ ನೀಡಲು ಸೂಚಿಸಿದ್ದು, ಈಗಾಗಲೇ ಅನೇಕ ತಾಲೂಕುಗಳಿಂದ ವರದಿ ಬಂದಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 4ರಂದು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಯಲಿದ್ದು, ಬರ ಪೀಡಿತ ತಾಲೂಕುಗಳನ್ನು ಅಂತಿಮಗೊಳಿಸಿ ಘೋಷಣೆ ಮಾಡಲಾಗುವುದು. ಪರಿಹಾರ ಕ್ರಮಗಳ ಬಗ್ಗೆಯೂ ಚರ್ಚಿಸಲಾಗುವುದು. ಮಳೆ ಕೊರತೆ, ಬೆಳೆ ನಷ್ಟ ಆಧಾರದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಬರ ತಾಲ್ಲೂಕುಗಳ ಹೊಸ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ತಿಳಿಸಿದ್ದಾರೆ.