ಗಾಜಿಯಾಬಾದ್: ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಗಾಜಿಯಾಬಾದ್‌ನ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕೆಲವು ವಿದ್ಯಾರ್ಥಿನಿಯರು ರಕ್ತದಲ್ಲಿ ಪತ್ರ ಬರೆದಿದ್ದರು. ಆ ನಂತರ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.
ಸಿಎಂಗೆ ಬರೆದ ನಾಲ್ಕು ಪುಟಗಳ ಪತ್ರದಲ್ಲಿ, ಪ್ರಾಂಶುಪಾಲ ರಾಜೀವ್ ಪಾಂಡೆ ತಮ್ಮನ್ನು ಒಬ್ಬೊಬ್ಬರಾಗಿ ಕಚೇರಿಗೆ ಕರೆದು ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಪ್ರಾಂಶುಪಾಲರು ಬೆದರಿಕೆ ಹಾಕಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಹೀಗಾಗಿ ರಕ್ತದಲ್ಲಿ ಸಿಎಂ ಯೋಗಿಗೆ ಪತ್ರ ಬರೆದ ವಿದ್ಯಾರ್ಥಿನಿಯರು, ನಾವು ನಿಮ್ಮನ್ನು ಭೇಟಿಯಾಗಲು ಬಯಸುತ್ತೇವೆ ಮತ್ತು ನಮಗೆ ನ್ಯಾಯ ನೀಡಬೇಕು ಎಂದು ಕೋರುತ್ತೇವೆ. ದಯವಿಟ್ಟು ನಮಗೆ ಸಮಯ ನೀಡಿ ಎಂದು ಪತ್ರದಲ್ಲಿ ಬರೆಯಲಾಗಿದೆ.
ಇನ್ನು ಪೊಲೀಸರ ವಿರುದ್ಧವೂ ಆರೋಪಿಸಿದ ವಿದ್ಯಾರ್ಥಿನಿಯರು, ತಮ್ಮ ಕುಟುಂಬಕ್ಕೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ನಮ್ಮನ್ನು ನಾಲ್ಕು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿತ್ತು. ಆದರೆ, ಪ್ರಾಂಶುಪಾಲರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಪ್ರತಿದಿನ ನಮ್ಮ ಮನೆಗೆ ಬಂದು ನಮ್ಮ ಪೋಷಕರಿಗೆ ಬೆದರಿಕೆ ಹಾಕುತ್ತಾರೆ. ಮನೆಯಿಂದ ಹೊರಬರಲು ಸಹ ಭಯಪಡುವಂತಾಗಿದೆ. ನಾವು ನಿಮ್ಮ ಹೆಣ್ಣುಮಕ್ಕಳು. ದಯವಿಟ್ಟು ನಮಗೆ ನ್ಯಾಯ ಒದಗಿಸಿ ಎಂದು ವಿದ್ಯಾರ್ಥಿನಿಯರು ಪತ್ರದಲ್ಲಿ ತಿಳಿಸಿದ್ದಾರೆ.
ಸದ್ಯ, ರಕ್ತದಲ್ಲಿ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಪ್ರಾಂಶುಪಾಲರನ್ನು ಬಂಧಿಸಿದ್ದಾರೆ.
ಪೊಲೀಸರು ಹೇಳಿದ್ದೇನು ?
ಆಗಸ್ಟ್ 21 ರಂದು ಕೆಲವು ವಿದ್ಯಾರ್ಥಿನಿಯರ ಪೋಷಕರು ಮತ್ತು ಸ್ಥಳೀಯ ಕೌನ್ಸಿಲರ್ ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಾಲೆಗೆ ಹೋಗಿದ್ದರು. ತೀವ್ರ ವಾಗ್ವಾದವು ಪ್ರಾಂಶುಪಾಲರಿಗೆ ಥಳಿಸಲಾಯಿತು ಎನ್ನಲಾಗಿದೆ. ನಂತರ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಕ್ಕಾಗಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ಆದರೆ, ಪ್ರಾಂಶುಪಾಲ ರಾಜೀವ್ ಪಾಂಡೆ ಕೂಡ ತನಗೆ ಥಳಿಸಿದ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ರಾಜೀವ್ ಪಾಂಡೆಗೆ ಸಣ್ಣ-ಪುಟ್ಟ ಗಾಯಗಳಾಗಿರುವ ಕಾರಣ ಪೋಷಕರ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.