ಸರ್ಕಾರದ ಆದೇಶದ ಅನುಸಾರ ಈ ಬಾರಿಯ ರೈತರ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ದಾಖಲಿಸಲು https://play.google.com/store/apps/details?id=com.csk.PR_Kharif_2023.cropsurvey ಎಂಬ ಹೆಸರಿನ ಮೊಬೈಲ್ ಆಪ್ ಅನ್ನು ಗೂಗಲ್ ಪ್ಲೇ-ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಮೊಬೈಲ್ ಆಪ್ ಬಳಕೆ ಮಾಡುವ ರೀತಿಯನ್ನು ರೈತರಿಗೆ ತಿಳಿಸಲು ಪ್ರತಿ ಗ್ರಾಮದಲ್ಲಿ ನುರಿತ ಖಾಸಗಿ ನಿವಾಸಿಗಳನ್ನು ನೇಮಿಸಲಾಗಿರುತ್ತದೆ.
ರೈತರು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಅನ್ನು ಬಳಸಲು ಹೊಸ ರೈತರ ಬೆಳೆ ಸಮೀಕ್ಷೆ ಅಪ್ಲಿಕೇಷನ್ ಫ್ರೂಟ್ಸ್ (FRUITS) ತಂತ್ರಾಂಶದ ಎಫ್‍ಐಡಿ (FID) ಸಂಖ್ಯೆಗೆ ಜೋಡಣೆಯಾಗಿರುವುದರಿಂದ ಅಪ್ಲಿಕೇಷನ್ ಬಳಸಲು ರೈತರು ಫ್ರೂಟ್ಸ್ ತಂತ್ರಾಂಶದ ಎಫ್‍ಐಡಿ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಮೊದಲಿಗೆ ಗೂಗಲ್ ಪ್ಲೇಸ್ಟೋರ್‍ನಲ್ಲಿ https://play.google.com/store/apps/details?id=com.csk.PR_Kharif_2023.cropsurvey\ ಎಂದು ಹುಡುಕಿ ಡೌನ್‍ಲೋಡ್ ಮಾಡಿಕೊಳ್ಳುವುದು.
ಇಕೆವೈಸಿ ಮೂಲಕ ಆಧಾರ್ ಧೃಡೀಕರಿಸಿ ಎಂದು ಕ್ಲಿಕ್ಕಿಸಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಜನರೇಟ್ ಒಟಿಪಿ ಎಂದು ಕ್ಲಿಕ್ಕಿಸಿ ನಂತರ ಬರುವ 6 ಅಂಕಿಯ ಒಟಿಪಿ ನಮೂದಿಸಿ, ನಂತರ ಮೊಬೈಲ್ ನಂಬರ್ ಅನ್ನು ನಮೂದಿಸಿ 4 ಅಂಕಿಯ ಒಟಿಪಿ ಪಡೆದುಕೊಂಡು ಅಪ್ಲಿಕೇಷನ್ ಸಕ್ರಿಯಗೊಳಿಸಲು ಒಟಿಪಿ ನಮೂದಿಸಿ. ರೈತರ ಆಧಾರ್ ಸಂಖ್ಯೆ ಮತ್ತು ಎಫ್‍ಐಡಿ ಸಂಖ್ಯೆಗೆ ಜೋಡಣೆಯಾದ ಎಲ್ಲಾ ಜಮೀನುಗಳ ಮಾಹಿತಿಗಳು ಡೌನ್‍ಲೋಡ್ ಆಗುತ್ತವೆ.
ಮುಂದಿನ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ದಾಖಲಿಸಬೇಕು. ಈ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಪಾಳು ಬಿಟ್ಟಿರುವ ಪ್ರದೇಶ, ಕೃಷಿಯೇತರ ಬಳಕೆಗೆ (ಕೊಟ್ಟಿಗೆ, ಕೃಷಿ ಹೊಂಡ, ಮನೆ ಇತರೆ) ಬಳಕೆಯಾದ ಪ್ರದೇಶದ ವಿವರವನ್ನು ಸಹ ದಾಖಲಿಸಬೇಕಾಗಿರುತ್ತದೆ. ರೈತರು ತಾವು ಬೆಳೆದ ಬೆಳೆಯ ಗಿಡದ ಸಂಖ್ಯೆ ಮತ್ತು ಪ್ರತಿ ಗಿಡ ಅಂತರವನ್ನು ನಮೂದಿಸಬೇಕು.
ರೈತರು ತಾವು ಬೆಳೆದ ಪ್ರತಿ ಬೆಳೆಯ ವಿಸ್ತೀರ್ಣದ ಜೊತೆಗೆ ಪ್ರತಿ ಬೆಳೆಯ 2 ಛಾಯಾ ಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕಿದೆ. ಹೀಗೆ ಅಪ್ಲೋಡ್ ಮಾಡಲಾದ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು (ಮೇಲ್ವಿಚಾರಕರು) ಪರಿಶೀಲಿಸಿ ಅನುಮೋದಿಸುತ್ತಾರೆ.
ರೈತರು ಎಫ್‍ಐಡಿ ಸಂಖ್ಯೆ ಹೊಂದಿಲ್ಲದಿದ್ದಲ್ಲಿ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಎಫ್‍ಐಡಿ ಸಂಖ್ಯೆ ಮಾಡಿಸಿಕೊಳ್ಳಬಹುದು. ಎಫ್‍ಐಡಿ ಸಂಖ್ಯೆಗೆ ಯಾವುದಾದರೂ ಜಮೀನು ಸೇರ್ಪಡೆ ಆಗದೇ ಇದ್ದಲ್ಲಿ ಸೇರಿಸಿಕೊಳ್ಳಲು ಇದೇ ಮೊಬೈಲ್ ಆಫ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಹೀಗೆ ಸಂಗ್ರಹಿಸಲಾದ ರೈತರ ಬೆಳೆ ಸಮೀಕ್ಷೆ ಮಾಹಿತಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು. ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು. ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ಕಾರ್ಯದಲ್ಲಿ. ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು. ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ. ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮುಖಾಂತರ ಬೆಳೆ ಸಾಲ ನೀಡುವ ಸಂದರ್ಭದಲ್ಲಿ ಬೆಳೆ ಪರಿಶೀಲನೆ ಮಾಡಲು ಸರ್ಕಾರದ ಯೋಜನೆಗಳಿಗೆ ಬಳಸಲಾಗುತ್ತದೆ.
ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯ ರೈತರು ಈ ಅವಕಾಶದ ಸದುಪಯೋಗ ಪಡೆದುಕೊಂಡು “ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ತಾವೇ ಸರ್ಕಾರಕ್ಕೆ ನಿಗದಿತ ಸಮಯದೊಳಗೆ ವರದಿ ಮಾಡಲು” ಈ ಮೂಲಕ ಕೋರಿದೆ.
ಹೆಚ್ಚಿನ ಮಾಹಿತಿಗೆ ಕೇಂದ್ರ ಕಚೇರಿಯ ಸಹಾಯವಾಣಿ ಸಂಖ್ಯೆ 7848914915 ಮತ್ತು ಬೆಳೆ ಸಮೀಕ್ಷೆ ಸಹಾಯವಾಣಿ ಸಂಖ್ಯೆ 8448447715, ತಮ್ಮ ಗ್ರಾಮದ ಖಾಸಗಿ ನಿವಾಸಿಯನ್ನು ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು, ತಮ್ಮ ಗ್ರಾಮದ ಗ್ರಾಮ ಲೆಕ್ಕಿಗರನ್ನು ಅಥವಾ ನಾಡ ಕಚೇರಿ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಬಾಲರಾಜ್ ರಂಗರಾವ್ ಅವರು ತಿಳಿಸಿದ್ದಾರೆ.