ಕಲಬುರ್ಗಿ: ತಮ್ಮ ವಿರುದ್ಧ ಮಹಿಳಾ ಅಧಿಕಾರಿ ಡಾ.ಅರ್ಚನಾ ಮಾಡಿರುವ ಕಿರುಕುಳ ಆರೋಪ ನಿರಾಕರಿಸಿರುವ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡ ಶರಣು ಮೋದಿ, ಜಿಲ್ಲೆಯಲ್ಲಿ 200-300 ಅನಧಿಕೃತ ನೀರಿನ ಘಟಕಗಳಿವೆ. ಒಂದೇ ಘಟಕ ಯಾಕೆ ಬಂದ್ ಮಾಡುತ್ತೀರಿ? ಎಲ್ಲಾ ಘಟಕ ಬಂದ್ ಮಾಡಿಸಿ ಎಂದು ಹೇಳಿದ್ದೇನೆ. ಮಾಹಿತಿ ಕೇಳಿದರೆ ಅದು ಹೇಗೆ ತಪ್ಪಾಗುತ್ತೆ? ಎಂದು ಪ್ರಶ್ನಿಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರಣು ಮೋದಿ, ನಾನು ಮಾಜಿ ಮೇಯರ್. ಹಲವರು ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಳ್ಳುತ್ತಾರೆ. ಅದೇ ರೀತಿ ಸಂಜೀವನ ನೀರಿನ ಘಟಕದವರು ಕೂಡ ನಮ್ಮ ಘಟಕ ಮಾತ್ರ ಬಂದ್ ಮಾಡಿಸಿದ್ದಾಗಿ ಸಮಸ್ಯೆ ಹೇಳಿಕೊಂಡಿದ್ದರು. ಈ ಬಗ್ಗೆ ಮಹಿಳಾ ಅಧಿಕಾರಿಗೆ ಫೋನ್ ಮಾಡಿ ಮಾಹಿತಿ ಕೇಳಿದ್ದೇನೆ. ಮಾಹಿತಿ ಕೇಳಿದರೆ ತಪ್ಪು ಹೇಗೆ ಆಗುತ್ತೆ? ಬೆದರಿಕೆ ಆರೋಪ ಸರಿಯಲ್ಲ. ನಾನು ಯಾವುದೇ ಬೆದರಿಕೆ ಹಾಕಿಲ್ಲ. ಒಂದೇ ಒಂದು ನೀರಿನ ಘಟಕವನ್ನು ಮಾತ್ರ ಯಾಕೆ ಬಂದ್ ಮಾಡಿಸಿದ್ದೀರಿ ಎಂದು ಕೇಳಿದ್ದೇನೆ ಎಂದಿದ್ದಾರೆ.
ಅಧಿಕಾರಿಗಳಿಗೆ ಫೋನ್ ಮಾಡಿದರೆ ಅವರು ಇಂಗ್ಲೀಷಿನಲ್ಲಿ ಮಾತನಾಡಲು ಆರಂಭಿಸುತ್ತಾರೆ. ಅಧಿಕಾರಿಗಳು ಇಂಗ್ಲೀಷಿನಲ್ಲಿ ಮಾತನಾಡಿದರೆ ಸಾಮಾನ್ಯ ಜನರ ಗತಿಯೇನು? ಅಧಿಕಾರಿಯ ಪತಿಯೇ ಕಚೇರಿಯಲ್ಲಿ ಕಾರುಬಾರು ನಡೆಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಇಂತಹ ಅಧಿಕಾರಿಗಳು ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.