alex Certify ಆ.31 ರಿಂದ ಶಿವಮೊಗ್ಗ- ಬೆಂಗಳೂರು ವಿಮಾನಯಾನ ಸೇವೆ ಆರಂಭ : ಸಚಿವ ಎಂ.ಬಿ ಪಾಟೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆ.31 ರಿಂದ ಶಿವಮೊಗ್ಗ- ಬೆಂಗಳೂರು ವಿಮಾನಯಾನ ಸೇವೆ ಆರಂಭ : ಸಚಿವ ಎಂ.ಬಿ ಪಾಟೀಲ್

ಬೆಂಗಳೂರು: ಶಿವಮೊಗ್ಗದಲ್ಲಿ ರಾಜ್ಯ ಸರಕಾರದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಗಳು ಗುರುವಾರದಿಂದ (ಆ.31) ಆರಂಭವಾಗಲಿವೆ. ಈ ಮೂಲಕ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಹೊಸ ಎತ್ತರವನ್ನು ತಲುಪಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ವಿಮಾನಯಾನ ಸೇವೆಗಳ ಮೊದಲ ಹೆಜ್ಜೆಯಾಗಿ ಇಂಡಿಗೋ ಸಂಸ್ಥೆಯು ವಿಮಾನವು ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಲಿದೆ. ಮೊದಲ ಯಾನದಲ್ಲಿ ತಾವೂ ಪ್ರಯಾಣಿಸಲಿದ್ದು, ಜೊತೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳೂ ಇರಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದೊಡನೆಯೇ ವಾಟರ್ ಸೆಲ್ಯೂಟ್ ಮೂಲಕ ಸಂಭ್ರಮಾಚರಣೆ ಮಾಡಲಾಗುವುದು” ಎಂದಿದ್ದಾರೆ.

ಇದು ರಾಜ್ಯದ ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣವಾಗಿದ್ದು, ಇದಕ್ಕೆ 450 ಕೋಟಿ ರೂ. ವಿನಿಯೋಗಿಸಲಾಗಿದೆ. ಶಿವಮೊಗ್ಗದಿಂದ 15 ಕಿ.ಮೀ. ದೂರದಲ್ಲಿರುವ ಸೋಗಾನೆ ಎಂಬಲ್ಲಿ 779 ಎಕರೆ ಜಾಗದಲ್ಲಿ ಏರ್ಪೋರ್ಟ್ ಮೈದಾಳಿದ್ದು, ಇದರಲ್ಲಿ ಏರ್ಬಸ್ ಮಾದರಿಯ ವಿಮಾನಗಳೂ ಬಂದಿಳಿಯುವ ಅನುಕೂಲಗಳನ್ನು ಕಲ್ಪಿಸಲಾಗಿದೆ. ಇದರಿಂದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಗೋವಾ ಮುಂತಾದ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುವುದು. ತಕ್ಷಣಕ್ಕೆ ಬೆಂಗಳೂರಿನಲ್ಲಿ ಈ ಸ್ಥಳಗಳಿಗೆ ಕನೆಕ್ಟಿಂಗ್ ವಿಮಾನಗಳು ಲಭ್ಯ ಇರಲಿವೆ. ಜೊತೆಗೆ, ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ವಿಸ್ತರಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದು ಅಂತಿಮ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೂಲ ಯೋಜನೆಯಲ್ಲಿ ಈ ಏರ್ಪೋರ್ಟ್ನಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಇರಲಿಲ್ಲ. ಈಗ ಅದನ್ನು ಪರಿಷ್ಕರಿಸಿ, ಆ ಅನುಕೂಲವನ್ನೂ ನೀಡಲಾಗಿದೆ. 4,340 ಚದರ ಮೀಟರ್ ವಿಸ್ತೀರ್ಣದ ಪ್ರಯಾಣಿಕರ ಟರ್ಮಿನಲ್ ಮತ್ತು 3,050 ಮೀಟರ್ ಉದ್ದದ ರನ್ವೇಯನ್ನು ಇದು ಒಳಗೊಂಡಿದೆ. ಮುಂದಿನ ಮೂರು ವಾರಗಳ ವಿಮಾನಯಾನ ಟಿಕೆಟ್ ಮುಂಗಡವಾಗಿ ಬುಕಿಂಗ್ ಆಗಿದ್ದು, ಒಳ್ಳೆಯ ಬೇಡಿಕೆ ವ್ಯಕ್ತವಾಗಿದೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...