
200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ‘ಗೃಹಜ್ಯೋತಿ’ ಯೋಜನೆಗೂ ಭರ್ಜರಿ ಸ್ಪಂದನೆ ಸಿಕ್ಕಿದ್ದು, ಇನ್ನು ಮಹಿಳೆಯರಿಗೆ ನಗದು ಪಾವತಿಸುವ ‘ಗೃಹಲಕ್ಷ್ಮಿ’ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ. ಈ ಯೋಜನೆ ಅಡಿ ಮನೆಯ ಯಜಮಾನಿ ಖಾತೆಗೆ ನೇರವಾಗಿ 2,000 ರೂಪಾಯಿಗಳನ್ನು ಪಾವತಿಸಲಾಗುತ್ತದೆ.
ಈ ಯೋಜನೆ ಆಶಾ – ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ವಯವಾಗುತ್ತದೋ ಇಲ್ಲವೋ ಎಂಬ ಗೊಂದಲವಿದ್ದು, ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೆರೆ ಎಳೆದಿದ್ದಾರೆ. ಸೋಮವಾರದಂದು ಚಾಮರಾಜನಗರದಲ್ಲಿ ಗೃಹಲಕ್ಷ್ಮಿ ಯೋಜನೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಅಂಗನವಾಡಿ – ಆಶಾ ಕಾರ್ಯಕರ್ತೆಯರಿಗೂ ಗೃಹಲಕ್ಷ್ಮಿ ಯೋಜನೆ ಅನ್ವಯವಾಗುತ್ತದೆ. ಅಲ್ಲದೆ ಯೋಜನೆಗೆ ನೋಂದಣಿ ಮಾಡಲು ಯಾವುದೇ ಗಡುವು ನಿಗದಿಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

