ಇತ್ತೀಚೆಗೆ ನಡೆದ ಮಹಿಳಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ತಮ್ಮ ತಂಡ ಗೆಲುವು ಸಾಧಿಸಿದ ವೇಳೆ ಆಟಗಾರ್ತಿ ಜೆನ್ನಿ ಎರ್ಮೊಸೋ ಅವರ ತುಟಿಗೆ ಸ್ಪೇನ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಲೂಯಿಸ್ ರುಬಿಯೇಲ್ಸ್ ಚುಂಬಿಸಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಲ್ಲದೆ ಲೂಯಿಸ್ ಅವರ ವರ್ತನೆಗೆ ಎಲ್ಲರೂ ಕಿಡಿ ಕಾರಿದ್ದರು.
ಜೊತೆಗೆ ಸ್ವತಃ ಆಟಗಾರ್ತಿ ಜೆನ್ನಿ ಎರ್ಮೊಸೋ ತಮಗೆ ಈ ಘಟನೆಯಿಂದ ಮುಜುಗರವಾಗಿದೆ ಎಂದು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನದಿಂದ ಪದತ್ಯಾಗ ಮಾಡುವಂತೆ ಲೂಯಿಸ್ ಅವರಿಗೆ ಸೂಚನೆ ನೀಡಲಾಗಿತ್ತಾದರೂ ಅವರು ಇದಕ್ಕೆ ನಿರಾಕರಿಸಿದ್ದರು. ಇದೀಗ ಫಿಫಾ ಕ್ರಮ ಕೈಗೊಂಡಿದೆ.
46 ವರ್ಷದ ಲೂಯಿಸ್ ರುಬಿಯೇಲ್ಸ್ ಅವರನ್ನು ಕನಿಷ್ಠ 90 ದಿನಗಳ ಮಟ್ಟಿಗೆ ಅಮಾನತುಗೊಳಿಸಲಾಗಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಫುಟ್ಬಾಲ್ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲ ಎಂದು ತಿಳಿಸಲಾಗಿದೆ. ಅಲ್ಲದೆ ಆಟಗಾರ್ತಿ ಜೆನ್ನಿ ಎರ್ಮೊಸೋ ಅಥವಾ ಆಕೆಯ ಆಪ್ತರನ್ನು ಸಂಪರ್ಕಿಸುವಂತಿಲ್ಲ ಎಂದು ಸೂಚಿಸಲಾಗಿದೆ.