ಬೀದರ್: ಕಂದಾಯ ಇಲಾಖೆಗಳ ದಾಖಲೆಗಳನ್ನು ಡಿಜಿಟಲೈಜೇಶನ್ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕಂದಾಯ ದಾಖಲೆಗಳನ್ನು ಸಂಗ್ರಹಿಸಿರುವ ರೆಕಾರ್ಡ್ ರೂಂಗಳ ನಿರ್ವಹಣೆ ಸೂಕ್ತವಾಗಿ ಮಾಡಿಲ್ಲ. 50 ರಿಂದ 70 ವರ್ಷ ಹಳೆಯ ದಾಖಲೆಗಳು ಹಾಳಾಗುವ ಆತಂಕ ಇದ್ದು, ಎಲ್ಲಾ ಹಳೆಯ ದಾಖಲೆಗಳನ್ನು ಡಿಜಿಟಲೈಜೇಶನ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಸರ್ಕಾರಿ ಭೂಮಿ ಸಂರಕ್ಷಣೆ ಮಾಡಲು ಆಪ್ ಮೂಲಕ ನಿರ್ವಹಿಸಲಾಗುವುದು. ಯಾವ ಗ್ರಾಪಂಗಳಲ್ಲಿ ಎಷ್ಟು ಜಮೀನು ಇದೆ ಎನ್ನುವ ಕುರಿತು ಆಪ್ ನಲ್ಲಿ ದಾಖಲಿಸಲಿದ್ದು, ಮೂರು ತಿಂಗಳಿಗೊಮ್ಮೆ ಆಯಾ ಗ್ರಾಮ ಲೆಕ್ಕಾಧಿಕಾರಿ ಸರ್ಕಾರಿ ಜಮೀನು ಕುರಿತು ಪರಿಶೀಲಿಸಿ ವರದಿ ನೀಡಲಿದ್ದಾರೆ. ಈ ಯೋಜನೆ ಜಾರಿ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಜನಸಾಮಾನ್ಯರ ತಕರಾರು ಅರ್ಜಿಗಳನ್ನು ಕಳೆದ ಎರಡು ತಿಂಗಳಿಂದ ಕಾಲಮಿತಿಯೊಳಗೆ ತ್ವರಿತವಾಗಿ ವಿಲೇವಾರಿ ಮಾಡಲಾಗುತ್ತಿದ್ದು, ತಾಲೂಕು ಕಚೇರಿಗಳಿಗೆ ಜನರು ಅನಗತ್ಯವಾಗಿ ಓಡಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಹಕ್ಕು ಬದಲಾವಣೆ ಪ್ರಕರಣಗಳಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.