ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಂಗಳೂರು ಸೇರಿದಂತೆ ರಾಜ್ಯದ 8 ನಗರಗಳಲ್ಲಿ ಜನವರಿ 1 ರಿಂದ ಜುಲೈ ಅಂತ್ಯದವರೆಗೆ ಬರೋಬ್ಬರಿ 57.99 ಲಕ್ಷ ಇ ಚಲನ್ ಗಳನ್ನು ನೀಡಲಾಗಿದ್ದು, ಇದರ ಮೊತ್ತ 303 ಕೋಟಿ ರೂಪಾಯಿಗಳಾಗಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ವಸೂಲಾಗಿರುವ ದಂಡದ ಮೊತ್ತ ಶೇಕಡ 10 ಅಂದರೆ ಕೇವಲ 29.22 ಕೋಟಿ ರೂಪಾಯಿಗಳು ಎಂದು ತಿಳಿದುಬಂದಿದೆ.
ಇನ್ನೂ 54 ಲಕ್ಷ ಪ್ರಕರಣಗಳಲ್ಲಿ ದಂಡ ವಸೂಲಾಗಬೇಕಿದ್ದು, ಈ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರು ವಿವಿಧ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ 2017 ರಿಂದಲೂ ರಾಜ್ಯದಲ್ಲಿ ಇ ಚಲನ್ ನೀಡಲಾಗುತ್ತಿದ್ದು, ಈ ವಿಚಾರದಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಜನವರಿ 1 ರಿಂದ ಜುಲೈ ಅಂತ್ಯದವರೆಗೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ವಿತರಿಸಲಾಗಿರುವ 57.99 ಲಕ್ಷ ಇ ಚಲನ್ ಪ್ರಕರಣಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ಬರೋಬ್ಬರಿ 50 ಲಕ್ಷ ಇ ಚಲನ್ ಗಳನ್ನು ವಿತರಿಸಿದ್ದರೆ ನಂತರದ ಸ್ಥಾನದಲ್ಲಿರುವ ಮೈಸೂರಿನಲ್ಲಿ 4.8 ಲಕ್ಷ ಹಾಗೂ ಹುಬ್ಬಳ್ಳಿ – ಧಾರವಾಡದಲ್ಲಿ 1.7 ಲಕ್ಷ ಇ ಚಲನ್ ಗಳನ್ನು ವಿತರಿಸಲಾಗಿದೆ. ಇನ್ನು ಬೆಳಗಾವಿ, ಮಂಗಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ವಿತರಿಸಲಾಗಿರುವ ಇ ಚಲನ್ ಗಳ ಸಂಖ್ಯೆ ಒಂದು ಲಕ್ಷದ ಒಳಗಿದೆ. ಪ್ರಸ್ತುತ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ಈ ಎಂಟು ನಗರಗಳಲ್ಲಿ ಮಾತ್ರ ಇ ಚಲನ್ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಇತರೆ ನಗರಗಳಿಗೂ ವಿಸ್ತರಿಸಲಾಗುತ್ತದೆ.