ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದೇ ವೇಳೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧವೂ ಹರಿಹಾಯ್ದಿದ್ದಾರೆ.
ಪ್ರಧಾನಿ ಮೋದಿ ಅವರ ಪ್ರಕಾರ 75 ವರ್ಷಕ್ಕೆ ರಾಜಕೀಯ ನಿವೃತ್ತಿಯಾಗಬೇಕು. ನನಗೆ 81 ವರ್ಷ ಆಗಿರುವುದರಿಂದ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲವೆಂದು ಹೇಳಿಬಿಟ್ಟಿದ್ದಾರೆ. ಬಿಜೆಪಿಯಲ್ಲಿ ಒನ್ ಫ್ಯಾಮಿಲಿ ಒನ್ ಟಿಕೆಟ್ ಎಂದು ಘೋಷಣೆಯಾಗಿದೆ. ಬಿಜೆಪಿಯಲ್ಲಿ ತಂದೆ, ಮಗ, ಮೊಮ್ಮಗ ಎಂಬ ರಾಜಕಾರಣಕ್ಕೆ ಅವಕಾಶವಿಲ್ಲ. ರಾಜಕಾರಣದಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಇರುತ್ತೇವೆ ಎಂದು ತಿಳಿಸಿದ್ದಾರೆ.
ತಮಿಳುನಾಡಿಗೆ ಕೆ.ಆರ್.ಎಸ್.ನಿಂದ ನೀರು ಬಿಟ್ಟಿರುವುದು ತಪ್ಪು. ಕೆಆರ್ಎಸ್ ಜಲಾಶಯದಲ್ಲಿ ನೀರಿಲ್ಲದೆ ನಮಗೆ ತೊಂದರೆ ಆಗುತ್ತಿದೆ. ಕಾವೇರಿ ನೀರು ಬಿಡಲು ನನ್ನ ವಿರೋಧವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಸಿಎಂ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಬಚ್ಚೇಗೌಡ ಹೇಳಿದ್ದಾರೆ.
ಬಿಜೆಪಿ ನನ್ನನ್ನು ಯಾವುದಕ್ಕೂ ಬಳಸಿಕೊಳ್ಳಲೇ ಇಲ್ಲ ಎಂದು ಸ್ವಪಕ್ಷದ ವಿರುದ್ಧವೇ ಹರಿಹಾಯ್ದಿದ್ದಾರೆ. ಬಿಜೆಪಿಯಲ್ಲಿ ನನ್ನನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಪರಿಗಣಿಸಲಿಲ್ಲ. ಪಕ್ಷ ಅಧಿಕಾರದಲ್ಲಿದ್ದರೂ ನನ್ನನ್ನು ಕೇರ್ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡದ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ರಾಜ್ಯ ಸರ್ಕಾರ ಹಣ ನೀಡುತ್ತೇವೆ ಎಂದರೂ ಅಕ್ಕಿ ನೀಡದಿರುವುದು ತಪ್ಪು. ನಾನು ರಾಜ್ಯದ ಸಂಸದನಾಗಿ ಹೇಳುತ್ತಿದ್ದೇನೆ. ಅಕ್ಕಿ ಕೊಡದಿರುವುದು ತಪ್ಪು. ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡದೆ ಅನ್ಯಾಯ ಮಾಡಿದೆ ಎಂದು ದೂರಿದ್ದಾರೆ.