ಬೆಂಗಳೂರು: ಮುಖ್ಯಮಂತ್ರಿ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಮತ್ತೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಅರಸು ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ಹಿತ ಎಂದರೆ ಅಲ್ಲಿರುವ ಒಂದು ಪ್ರಬಲ ಜಾತಿಗೆ ಅಧಿಕಾರ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತೊಂದು ಕಾರ್ಯಕ್ರಮಕ್ಕೆ ತೆರಳಬೇಕಾಗಿದ್ದರಿಂದ ವೇದಿಕೆಯಿಂದ ನಿರ್ಗಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಹರಿಪ್ರಸಾದ್, ಮುಖ್ಯಮಂತ್ರಿಗಳು ಇದ್ದು ಇದನ್ನು ಕೇಳಿಸಿಕೊಳ್ಳಬೇಕಿತ್ತು. ಹಿಂದುಳಿದ ವರ್ಗಗಳಲ್ಲಿ ಹಲವಾರು ಸಣ್ಣ ಸಣ್ಣ ಜಾತಿಗಳಿದ್ದು, ಇಂತಹ ಸಮಾಜಗಳನ್ನು ಗುರುತಿಸಿ ಅಧಿಕಾರ ನೀಡಬೇಕು ಎಂದು ಹೇಳಿದ್ದಾರೆ.
ದೇವರಾಜ ಅರಸು ಕಾಲದಲ್ಲಿ ನಾವು ವಿರೋಧಿ ಬಣದಲ್ಲಿದ್ದರೂ ನಮ್ಮನ್ನು ಕರೆದು ಮಾತನಾಡಿಸುತ್ತಿದ್ದರು. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಈಗ ಒಟ್ಟಿಗೆ ಕರೆದುಕೊಂಡು ಹೋಗುವುದಿರಲಿ, ವಿರೋಧಿಸುವವರನ್ನು ಶತ್ರುಗಳ ರೀತಿ ಕಾಣುತ್ತಾರೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಅರಸು ಅವರು ಕಾರ್ಯಕರ್ತರ ಮದುವೆಗಳಿಗೆ ಹೋಗಲಾಗದಿದ್ದರೂ ತಮ್ಮ ಸಲಹೆಗಾರರ ಮೂಲಕ 10-15 ಸಾವಿರ ರೂ. ಕೊಟ್ಟು ಕಳುಹಿಸುತ್ತಿದ್ದರು. ಕಾರ್ಯಕರ್ತರು ಇರಬೇಕು. ಇಲ್ಲವಾದರೆ ಪಕ್ಷಕ್ಕೆ ಸಂಕಷ್ಟ ಬರುತ್ತದೆ ಎಂದು ಹೇಳುತ್ತಿದ್ದರು ಎಂದು ಹರಿಪ್ರಸಾದ್ ನೆನಪಿಸಿದ್ದಾರೆ.