ಚಿಕ್ಕಮಗಳೂರು: ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ದತ್ತಪೀಠ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ವ್ಯವಸ್ಥಾಪನಾ ಸಮಿತಿ ವಜಾಗೊಳಿಸುವಂತೆ ಸೈಯದ್ ಬುಡೇನ್ ಶಾ ಖಾದ್ರಿ ಟ್ರಸ್ಟ್ ಸದದ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಹೈಕೋರ್ಟ್ ಆದೇಶದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ದತ್ತಪೀಠದಲ್ಲಿ ವ್ಯವಸ್ಥಾಪನಾ ಸಮಿತಿ ರಚನೆಯಾಗಿತ್ತು. ಇದೀಗ ಸಮಿತಿ ವಜಾಮಾಡಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿರುವುದು ವಿವಾದಕ್ಕೆ ಕಾರಣವಾಗಿದೆ.
8 ಜನ ಸದಸ್ಯರನ್ನು ಒಳಗೊಂಡ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾ ವ್ಯವಸ್ಥಾಪನಾ ಸಮಿತಿ ಕೋರ್ಟ್ ಆದೇಶದ ಮೇರೆಗೆ ರಚನೆಯಾಗಿದೆ. ವಜಾಗೊಳಿಸಿದರೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದಂತೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಈ ನಡುವೆ ಬಾಬಾಬುಡನ್ ಗಿರಿ ಇನಾಂ ದರ್ಗಾಗೆ ಎಸ್ ಡಿ ಪಿ ಐ ಮುಖಂಡರು ಭೇಟಿ ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ವ್ಯವಸ್ಥಾಪನಾ ಸಮಿತಿ ವಜಾಗೆ ಮನವಿ ಮಾಡಲಾಗಿದೆ ಎಂಬ ಆರೊಪ ಕೇಳಿಬರುತ್ತಿದೆ.