ಬೆಂಗಳೂರು: ಪಡಿತರ ಚೀಟಿಗೆ ಪ್ರತ್ಯೇಕ ಕಚೇರಿ ಆರಂಭಿಸಲಾಗುವುದು. ತಹಶೀಲ್ದಾರ್ ಗಳಿಗೆ ಕೊಟ್ಟಿದ್ದ ಅಧಿಕಾರ ಹಿಂಪಡೆಯಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಶುಕ್ರವಾರ ಆಹಾರ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಮಟ್ಟದ ನಿರ್ದೇಶಕರ ಸಭೆ ನಡೆಸಿದ ಸಚಿವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಡಿತರ ಚೀಟಿ ವಿತರಣೆ ಸೇರಿ ಇಲಾಖೆಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ ತಹಶೀಲ್ದಾರ್ ಮತ್ತು ಉಪ ತಹಶೀಲ್ದಾರ್ ಗಳ ಅಧಿಕಾರ ಹಿಂಪಡೆಯಲಾಗುವುದು. ಪ್ರತಿ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಇಲಾಖೆ ಕಛೇರಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿ ತಾಲೂಕಿಗೆ ಒಬ್ಬರು ಸಹಾಯಕ ನಿರ್ದೇಶಕರನ್ನು ನೇಮಕ ಮಾಡಲಿದ್ದು, ಆಹಾರ ನಿರೀಕ್ಷಕರು, ಡೇಟಾ ಎಂಟ್ರಿ ಆಪರೇಟರ್ ಮತ್ತಿತರ ಸಿಬ್ಬಂದಿಯನ್ನು ಒಳಗೊಂಡಂತೆ ಪ್ರತ್ಯೇಕ ವ್ಯವಸ್ಥೆ ರೂಪಿಸಲ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಆಹಾರ ಧಾನ್ಯಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಕೆಲವು ತಾಲೂಕುಗಳಲ್ಲಿ ಮಾತ್ರ ಗೋದಾಮಗಳಿವೆ. ಉಳಿದ ಕಡೆ ಖಾಸಗಿ ಮತ್ತು ಎಪಿಎಂಸಿ ಗೋದಾಮಗಳನ್ನು ಅವಲಂಬಿಸಲಾಗಿದ್ದು, ಹೀಗಾಗಿ ತಾಲೂಕಿಗೊಂದು ಗೋದಾಮು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಆಹಾರ ಇಲಾಖೆಯಲ್ಲಿ ಮಂಜೂರಾದ 3682 ಹುದ್ದೆಗಳಿದ್ದು ಖಾಲಿ ಇರುವ 2181 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.