ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) 225 ವಾರ್ಡ್ ಗಳ ಪಟ್ಟಿ ಪ್ರಕಟಿಸಲಾಗಿದೆ. ಈ ಮೊದಲು 198 ಇದ್ದ ವಾರ್ಡ್ ಗಳ ಸಂಖ್ಯೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ 243ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿತ್ತು.
ಈ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ವಾರ್ಡ್ ಗಳ ಸಂಖ್ಯೆಯನ್ನು 225 ಕ್ಕೆ ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ವಾರ್ಡ್ ಗಳ ಪಟ್ಟಿ ಪ್ರಕಟಿಸಲಾಗಿದ್ದು, 15 ದಿನಗಳ ಒಳಗೆ ಅಕ್ಷೇಪಣೆ ಸಲ್ಲಿಸಲು ಕೋರಲಾಗಿದೆ.
ನಗರಾಭಿವೃದ್ಧಿ ಇಲಾಖೆಯಿಂದ ಪ್ರಕಟಿಸಿದ ಅಧಿಸೂಚನೆ ಅನ್ವಯ ವಾರ್ಡ್ ಗಳ ಹೆಸರು ಇನ್ನಿತರ ವಿಷಯಗಳು ಸಂಬಂಧಿಸಿದ ಆಕ್ಷೇಪಣೆಗಳನ್ನು 15 ದಿನಗಳ ಒಳಗೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, ನಾಲ್ಕನೇ ಮಹಡಿ, ವಿಕಾಸ ಸೌಧ ಬೆಂಗಳೂರು -1 ಈ ವಿಳಾಸಕ್ಕೆ ತಲುಪಿಸಬೇಕಿದೆ. ಹಳೆ ವಾರ್ಡ್, ಹೊಸ ವಾರ್ಡ್ ಗಳ ಬದಲಾವಣೆ ಕುರಿತ ಮಾಹಿತಿಗೆ ವೆಬ್ಸೈಟ್ ಗಮನಿಸಬಹುದಾಗಿದೆ.