ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವಕೀಲ ನಾಗರಾಜ್ ಕುಡಪಲಿ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಫೇಸ್ ಬುಕ್ ನಲ್ಲಿ ವಕೀಲ ನಾಗರಾಜ ಕುಡಪಲಿ, ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು, ವಕೀಲರ ವಿರುದ್ಧ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲ ಪ್ರವೀಣ್ ಕುಮಾರ್ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ವಕೀಲ ನಾಗರಾಜ್ ಕುಡಪಲಿ ವಿರುದ್ಧ ಪ್ರವೀಣ್ ಕುಮಾರ್ ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೈಸೂರಿನಲ್ಲಿ ನಡೆದಿದ್ದ ಕರ್ನಾಟಕ ಬಾರ್ ಕೌನ್ಸಿಲ್ ಸಮಾವೇಶದ ವೇಳೆ ರಾಣೆಬೆನ್ನೂರಿನ ವಕೀಲ ನಾಗರಾಜ್ ಕುಡಪಲಿ, ವಕೀಲ ಪ್ರವೀಣ್ ಕುಮಾರ್ ಗೆ ಪರಿಚಯವಾಗಿದ್ದರು. ಈ ವೇಳೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲ್ಲ ಎಂದು ಸವಾಲು ಹಾಕಿದ್ದರು. ಈ ಕುರಿತು ಇಬ್ಬರೂ ವಕೀಲರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ನಾಗರಾಜ್ ಕುಡಪಲಿ, ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ತಮ್ಮ ಚಾಲೇಂಜ್ ಬಗ್ಗೆ ಹೇಳಿಕೊಂಡಿದ್ದರು. ನಂತರ ಆಗಸ್ಟ್ 14ರಂದು ಮತ್ತೊಂದು ವಿಡಿಯೋ ಹಾಕಿ ಕರ್ನಾಟಕ ಬಿಜೆಪಿ ಮುಕ್ತವಾಗಬೇಕು. ಮೋದಿ ಏನು ದೇವರೇನ್ರೀ? ಹಿ ವಾಸ್ ಒನ್ ಆಫ್ ದಿ ಟೆವೆಂಡರ್… ಹುದ್ದೆ ಬಿಟ್ಟರೆ ಯಾರವರು? ಸ್ವಂತ ಹಣದಲ್ಲಿ ವಿಮಾನದಲ್ಲಿ ಅಡ್ಡಾಡುವ ಶಕ್ತಿ ಅವನಿಗಿಲ್ಲ. ನಾನು ದುಡಿದ ಹಣದಲ್ಲಿ ವಿಮಾನದ ಟಿಕೆಟ್ ಪಡೆದು ಓಡಾಡುತ್ತಾನೆ…ಅವರದ್ದೇನಿದೆ ದುಡಿಮೆ? ಇಂದು ಒಬ್ಬ ಪ್ರವೀಣ್ ಎಂಬ ಕೋಮುವಾದಿ ನನ್ನ ಭೇಟಿಯಾಗಿದ್ದು ಫೇಸ್ ಬುಕ್ ಹಾಗೂ ಫೋನ್ ನಲ್ಲಿ ಸುಳ್ಳು ಹೇಳುವ ದುಷ್ಟಬುದ್ಧಿ ಇರುವವನು ಎಂದು ಅವಹೇಳನಕಾರಿ ಪೋಸ್ಟ್ ಮಾಡಿದ್ದರು.
ದೇಶದ ಪ್ರಧಾನಿ ಹಾಗೂ ತಮ್ಮ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿರುವ ವಕೀಲ ನಾಗರಾಜ್ ಕುಡಪಲಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಕೀಲ ಪ್ರವೀಣ್ ದೂರು ನೀಡಿದ್ದಾರೆ.