ಮೈಸೂರು: ಗಾದೆ ಮಾತು ಬಳಸಿ ಜಾತಿ ನಿಂದನೆ ಮಾಡಿದ ಉಪೇಂದ್ರ ಅವರನ್ನು ಬಂಧಿಸುವಂತೆ ಮೈಸೂರು ನಗರ ಪಾಲಿಕೆ ಮಾಜಿ ಮೇಯರ್ ಪುರುಷೋತ್ತಮ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಟ ಉಪೇಂದ್ರ ಬಂಧನವಾಗುವವರೆಗೂ ನಾವು ನಿದ್ದೆ ಮಾಡುವುದಿಲ್ಲ. ಸಮಯ ಸಾಧಕ ನಟ ಉಪೇಂದ್ರಗೆ ಬಿಟ್ಟಿ ಪ್ರಚಾರ ಬೇಕಾಗಿತ್ತು. ಯಾವ ಭಾಷೆ ಬಳಸಿದರೆ ಪ್ರಚಾರ ಸಿಗುತ್ತೆ ಎಂದು ಉಪೇಂದ್ರಗೆ ಗೊತ್ತಿದೆ. ಈಗಾಗಲೇ ಚಿತ್ರರಂಗದಲ್ಲಿ ಉಪೇಂದ್ರ ಕೆಳಮಟ್ಟಕ್ಕೆ ಬಂದಿದ್ದಾರೆ. ರಾಜಕೀಯ ಪಕ್ಷ ಕಟ್ಟಿದರೂ ಏನನ್ನು ಸಾಧಿಸಲು ಆಗಿಲ್ಲ ಎಂದು ಹೇಳಿದ್ದಾರೆ.
ನಟ ಚೇತನ್ ಬಂಧಿಸಿದ ರೀತಿ ಉಪೇಂದ್ರರನ್ನು ಬಂಧಿಸಬೇಕು. ಉಪೇಂದ್ರ ಬಂಧನ ವಿಳಂಬ ಆಗಿರಬಹುದು, ಆದರೆ, ಬಂಧಿಸಲೇಬೇಕು ಎಂದು ಆಗ್ರಹಿಸಿದ್ದಾರೆ.
ನಟ ಉಪೇಂದ್ರ ಪ್ರಕರಣದಲ್ಲಿ ಸರ್ಕಾರ ದಲಿತರನ್ನು ಕಡೆಗಣಿಸುತ್ತಿದೆ ಎಂದು ಸ್ವಪಕ್ಷೀಯ ಸರ್ಕಾರದ ವಿರುದ್ಧವೇ ಪುರುಷೋತ್ತಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂರ್ಖ ರಾಜಕಾರಣಿಗಳಿಗೆ ನಾವು ಯಾವುದೇ ಬೆಲೆ ಕೊಡುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ನಾವು ಎಲ್ಲರನ್ನೂ ಬೆಂಬಲಿಸುತ್ತೇವೆ. ಆದರೆ, ಅಧಿಕಾರ ಸಿಕ್ಕಾಗ ಅವರ ನಡವಳಿಕೆಯನ್ನು ಗಮನಿಸುತ್ತೇವೆ. ಅಧಿಕಾರ ಕೊಟ್ಟವರಿಗೆ ಅಧಿಕಾರ ಕಿತ್ತುಕೊಳ್ಳುವುದು ಕಷ್ಟವಾಗುವುದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಪುರುಷೋತ್ತಮ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.