ಕಾರವಾರ: ಬಾಂಬೆ ಟೀಂ ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದು, ನನಗೆ ಅಂತಹ ಕಾಲನಿರ್ಣಯ ಆಗಿಲ್ಲ ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಶಿವರಾಮ್ ಹೆಬ್ಬಾರ್, ಬಾಂಬೆ ಟೀಂ ಕಾಂಗ್ರೆಸ್ ಗೆ ಮರಳುವ ವಿಚಾರವಾಗಿ ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿ ನೋಡಿದೆ. ಯಾವುದೇ ನಿರ್ಣಯವನ್ನ ಕ್ಷೇತ್ರದ ಜನರೊಂದಿಗೆ ಚರ್ಚಿಸದೇ ಮಾಡಲು ಆಗಲ್ಲ ಎಂದರು.
ನಾನು ಯಾವುದೇ ಸಭೆ, ಸಮಾರಂಭ ಅಥವಾ ಚರ್ಚೆ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಅಂತಹ ಪರಿಸ್ಥಿತಿ ಬಂದಾಗ ಕ್ಷೇತ್ರದ ಜನರನ್ನ ಬಿಟ್ಟು ರಾಜಕಾರಣ ಮಾಡಲ್ಲ. ಅಂತಿಮವಾಗಿ ನಮ್ಮ ಹಣೆಬರಹ ಬರೆಯೋದು ಕ್ಷೇತ್ರದ ಜನರೇ. ನನಗೆ ಅಂತಹ ಕಾಲನಿರ್ಣಯ ಆಗಿಲ್ಲ, ಹಾಗಾಗಿ ಉತ್ತರ ಕೊಡೋ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯದ ಹಲವಾರು ಜಿಲ್ಲೆಗಳನ್ನ ಬರಪೀಡಿತ ಅಂತ ಘೋಷಣೆ ಮಾಡ್ಬೇಕು. ಕುಡಿಯುವ ನೀರಿಗೆ ಈಗಾಗ್ಲೇ ತೊಂದರೆ ಅನುಭವಿಸೋ ಕಾಲಘಟ್ಟಕ್ಕೆ ಬಂದಿದ್ದೇವೆ. ವಾಸ್ತವಿಕ ಮಳೆಗಿಂತ 62 ಪ್ರತಿಶತ ಮಳೆ ಕಡಿಮೆಯಾಗಿದೆ. ರೈತರು ಬಿತ್ತಿದ ಬೆಳೆಗಳೆಲ್ಲ ಹಾನಿಯಾಗಿದೆ. ರಾಜ್ಯ ಸರ್ಕಾರ ಬೆಳೆಗೆ ಸೂಕ್ತ ಪರಿಹಾರ ಕೊಡಕು. ಕುಡಿಯುವ ನೀರಿನ ಬಗ್ಗೆ ಸರ್ಕಾರ ಗಂಭೀರವಾದ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಹೇಳಿದರು.