ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಪ್ರವೇಶ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಕಾಲೇಜು ಆಯ್ಕೆ ಮಾಡಿಕೊಳ್ಳಲು ಇಂದಿನಿಂದಲೇ ಅವಕಾಶ ಸಿಗಲಿದೆ.
ಮಧ್ಯಾಹ್ನ 1.00 ಗಂಟೆ ಬಳಿಕ ಅಭ್ಯರ್ಥಿಗಳು ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಆಗಸ್ಟ್ 20ರ ಮಧ್ಯರಾತ್ರಿ 11.59 ರ ವರೆಗೆ ಇದಕ್ಕೆ ಅವಕಾಶವಿರಲಿದೆ. ಆಗಸ್ಟ್ 19 ರಿಂದ 22 ರವರೆಗೆ ಆನ್ಲೈನ್ ಮೂಲಕ ಶುಲ್ಕ ಪಾವತಿಸಬಹುದಾಗಿದ್ದು, ಆಯ್ಕೆ -1 ನಮೂದಿಸಿರುವವರು ಶುಲ್ಕ ಪಾವತಿಸಿದ ನಂತರ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಆಯ್ಕೆ ಮಾಡಿಕೊಂಡ ಕಾಲೇಜುಗಳಿಗೆ ಪ್ರವೇಶ ಪಡೆಯಲು ಆಗಸ್ಟ್ 23 ಕೊನೆಯ ದಿನಾಂಕವಾಗಿದ್ದು, ಒಂದು ವೇಳೆ ಪ್ರವೇಶ ಸಿಕ್ಕಿರುವ ಕಾಲೇಜು ಇಷ್ಟವಾಗದಿದ್ದಲ್ಲಿ ಮತ್ತೊಂದು ಕಾಲೇಜಿಗೆ ಪ್ರವೇಶ ಬಯಸುವವರು ಆಯ್ಕೆ -2 ನ್ನು ನಮೂದಿಸಿ ಶುಲ್ಕ ಪಾವತಿಸಬೇಕಾಗುತ್ತದೆ. ಇವರುಗಳು ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ವೀಕ್ಷಿಸಿದ ಬಳಿಕ ಪ್ರವೇಶ ಪಡೆಯಬಹುದಾಗಿದೆ.
ನೀಟ್ ಅಭ್ಯರ್ಥಿಗಳಿಗೆ ಮತ್ತೊಂದು ಮಹತ್ವದ ಮಾಹಿತಿ ಇಂತಿದ್ದು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನಂತರ ಆಯ್ಕೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ. ಹೀಗಾಗಿ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವವರು ಬಲು ಎಚ್ಚರಿಕೆಯಿಂದ ಆಪ್ಷನ್ ಎಂಟ್ರಿಯನ್ನು ನಮೂದಿಸಬೇಕಾಗುತ್ತದೆ.