ನವದೆಹಲಿ: ಶಿಕ್ಷಕಿಯೊಬ್ಬರ ಕೈಯಲ್ಲಿದ್ದ ಐಫೋನ್ ಕದಿಯಲು ದುಷ್ಕರ್ಮಿಗಳು ದಾಳಿ ನಡೆಸಿದ್ದು, ಆಟೋದಲ್ಲಿ ಹೋಗುತ್ತಿದ್ದ ಶಿಕ್ಷಕಿಯನ್ನು ರಸ್ತೆಯುದ್ದಕ್ಕೂ ಎಳೆದಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಪ್ರತಿಷ್ಠಿತ ಜ್ಞಾನ ಭಾರತಿ ಶಾಲೆಯ ಶಿಕ್ಷಕಿ ಶಾಲೆ ಮುಗಿಸಿ ಮಧ್ಯಾಹ್ನ ಆಟೋದಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಶಿಕ್ಷಕಿಯ ಕೈಯಲ್ಲಿದ್ದ ಮೊಬೈಲ್ ಎಗರಿಸಲು ಮುಂದಾಗಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಆಟೋ ಸುತ್ತುವರಿದು ಆಟೋವನ್ನೇ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಕೆಲ ದೂರ ಆಟೋ ಚಲಿಸುತ್ತಿದ್ದಂತೆ ಶಿಕ್ಷಕಿ ಬಳಿ ಇರುವ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಆದರೆ ಶಿಕ್ಷಕಿ ಮೊಬೈಲ್ ಬಿಟ್ಟಿಲ್ಲ. ದುಷ್ಕರ್ಮಿಗಳು ಎಳೆದ ರಭಸಕ್ಕೆ ಆಕೆ ಆಟೋದಿಂದ ಕೆಳಗೆ ಬಿದ್ದಿದ್ದಾರೆ.
ಆದರೂ ದುಷ್ಕರ್ಮಿಗಳು ಆಕೆಯ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಳ್ಳಲು ರಸ್ತೆಯುದ್ದಕ್ಕೂ ಶಿಕ್ಷಕಿಯನ್ನು ಎಳೆದೊಯ್ದಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಹೋರಾಡಲು ಶಿಕ್ಷಕಿಗೆ ಸಾಧ್ಯವಾಗಿಲ್ಲ. ಮೊಬೈಲ್ ಬಿಟ್ಟುಬಿಟ್ಟಿದ್ದಾರೆ. ಆಟೋದಿಂದ ಶಿಕ್ಷಕಿ ಬಿದ್ದು, ರಸ್ತೆಯಲ್ಲಿ ಎಳೆದೊಯ್ದ ಪರಿಣಾಮ ಮುಖ, ಕೈಕಾಲುಗಳಿಗೆ ಗಂಭೀರವಾದ ಗಾಯಗಳಾಗಿವೆ. ಸಾಕೇತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳು ಶಿಕ್ಷಕಿ ಯೋವಿಕಾ ಚೌಧರಿಯನ್ನು ಸಾಕೇತ್ ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲಿಸರು ಹುಡುಕಾಟ ನಡೆಸಿದ್ದಾರೆ.