ಬೆಂಗಳೂರು : ಈ ವರ್ಷ ತಡವಾಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಂದಿನ ವರ್ಷದಿಂದ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲಾಗುವುದು. ಈ ವರ್ಷ ಶಿಕ್ಷಣ ನೀತಿ ಜಾರಿಗೆ ತರಲು ಸ್ವಲ್ಪ ತಡವಾಯಿತು. ಮುಂದಿನ ವರ್ಷದಿಂದ ರಾಜ್ಯ ಶಿಕ್ಷಣ ನೀತಿ ಜಾರಿಗೆ ಬರಲಿದೆ ಎಂದರು.
ನಮಗೆ ಆಶೀರ್ವಾದ ಮಾಡಿದ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮಗೆ ಪ್ರತಿ ಬಾರಿಯೂ ಶೇಕಡವಾರು ಮತಗಳು ಹೆಚ್ಚಾಗುತ್ತಿವೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 42.88 ರಷ್ಟು ಮತಗಳು ಬಂದಿದ್ದಾವೆ. ರಾಜ್ಯದ ಜನರು ಸಂಪೂರ್ಣವಾಗಿ ಬಿಜೆಪಿ, ಜೆಡಿಎಸ್ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿದ್ರೂ ಗೆಲ್ಲಲಾಗಲಿಲ್ಲ. ಬಿಜೆಪಿಯವರ ಲೆಕ್ಕಾಚಾರ ತಲೆಕೆಳಗಾಗಿದೆ. ಮೋದಿ ಎಲ್ಲೆಲ್ಲೆ ಪ್ರಚಾರ ಮಾಡಿದ್ದಾರೋ ಅಲ್ಲೆಲ್ಲಾ ಬಿಜೆಪಿ ಸೋತಿದೆ. ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದ ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಿಜೆಪಿ ಅವನತಿ ಕರ್ನಾಟಕದಿಂದಲೇ ಆರಂಭವಾಗಿದೆ ಎಂದರು.