ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಐದನೇ ಟ್ರಿಪ್ ಕಾಶಿ ಯಾತ್ರೆಗೆ ಯಾತ್ರಾರ್ಥಿಗಳಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ಕರ್ನಾಟಕ ಭಾರತ್ ಗೌರವ್ ಕಾಶಿ -ಗಯಾ ದರ್ಶನದ ರೈಲು ಆಗಸ್ಟ್ 29ರಂದು ಹೊರಡಲಿದೆ. ಪುಣ್ಯಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ಕ್ಷೇತ್ರಗಳ ಪ್ಯಾಕೇಜ್ ಯಾತ್ರೆಗೆ ಈ ಬಾರಿ ಬಿಹಾರದ ಗಯಾ ಕ್ಷೇತ್ರವನ್ನು ಸೇರ್ಪಡೆ ಮಾಡಲಾಗಿದೆ. ಇದರೊಂದಿಗೆ 5000 ರೂ. ಇದ್ದ ಸಹಾಯಧನದ ಮೊತ್ತವನ್ನು 7,500 ರೂ.ಗೆ ಹೆಚ್ಚಳ ಮಾಡಲಾಗಿದೆ.
ಕಳೆದ ಸಲ ಕಾಶಿಯಾತ್ರೆ ರೈಲಿನಲ್ಲಿ 200 ಸೀಟುಗಳಿಗೆ ಯಾತ್ರಾರ್ಥಿಗಳು ಬಾರದ ಕಾರಣ ರೈಲು ಖಾಲಿಯಾಗಿ ತೆರಳಿತ್ತು. ಈ ಬಾರಿ ಇನ್ನು ಹಲವು ದಿನ ಬಾಕಿ ಇರುವಾಗಲೇ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ.
ಆಗಸ್ಟ್ 29ರಂದು ಯಾತ್ರೆಗೆ ಹೊರಡುವ ರೈಲು ಸೆಪ್ಟಂಬರ್ 6ರಂದು ವಾಪಸ್ಸಾಗಲಿದೆ. 22,500 ರೂಪಾಯಿ ದರ ನಿಗದಿಪಡಿಸಿದ್ದು, ಯಾತ್ರಾರ್ತಿಗಳು 15,000 ರೂ. ಭರಿಸಬೇಕು. ಸರ್ಕಾರ 7500 ರೂ. ಸಹಾಯಧನ ನೀಡಲಿದೆ. ವಿವರಗಳಿಗಾಗಿ https://www.irctctourism.com ವೆಬ್ಸೈಟ್ ಗಮನಿಸಬಹುದಾಗಿದೆ ಎಂದು ಹೇಳಲಾಗಿದೆ.