ಬೆಂಗಳೂರು : ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡಿದ ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ ವಿರುದ್ಧ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆಗಳು ಮತ್ತೆ ಸಿಡಿದೆದ್ದಿದ್ದು, ಆ.19 ರಂದು ರಾಜ್ಯಾದ್ಯಂತ ಖಾಸಗಿ ಬಸ್, ಆಟೋ ಮುಷ್ಕರ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ.
ಖಾಸಗಿ ಬಸ್, ಆಟೋ, ಟ್ಯಾಕ್ಸಿ ಚಾಲಕರಿಗೆ ಇದುವರೆಗೂ ರಾಜ್ಯ ಸರ್ಕಾರ ಯಾವುದೇ ಪರಿಹಾರ ನೀಡದೇ ಇರುವ ಹಿನ್ನೆಲೆ ಸಂಘಟನೆಗಳು ಮುಷ್ಕರ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ. ಅಂದು ಆಟೋ, ಖಾಸಗಿ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಶಕ್ತಿ ಯೋಜನೆಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಆಟೋರಿಕ್ಷಾ ಸೇರಿ ಸಾರ್ವ ಜನಿಕ ಸೇವೆಯ ಖಾಸಗಿ ವಾಹನ ಚಾಲಕರಿಗೆ ಮಾಸಿಕ 10 ಸಾವಿರ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು.
ಖಾಸಗಿ ಬಸ್, ಕ್ಯಾಬ್, ರಿಕ್ಷಾ ಚಾಲಕರಿಗೆ ಪರಿಹಾರ ಘೋಷಣೆ
ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ನಷ್ಟಕ್ಕೆ ಒಳಗಾದ ಖಾಸಗಿ ಬಸ್, ಕ್ಯಾಬ್, ರಿಕ್ಷಾ ಚಾಲಕರಿಗೆ ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆ.ಖಾಸಗಿ ಸಾರಿಗೆ ಉದ್ಯಮ ವಿವಿಧ ಕಾರಣಗಳಿಂದ ಸಂಕಷ್ಟಕ್ಕೆ ಒಳಗಾಗಿದ್ದು, ರಾಜ್ಯ ಸರ್ಕಾರದಿಂದ ಇದಕ್ಕಾಗಿ ಕೈಗೊಳ್ಳಬೇಕಿರುವ ಪರಿಹಾರ ಕ್ರಮಗಳು ಮತ್ತು ಸಾರಿಗೆ ಉದ್ಯಮದ ನಷ್ಟದ ಬಗ್ಗೆ ವರದಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ಇಲಾಖೆ ಸೂಚನೆ ನೀಡಿದ್ದು, ವರದಿ ಆಧರಿಸಿ ಪರಿಹಾರ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊರೋನಾ ಸೇರಿ ವಿವಿಧ ಕಾರಣದಿಂದ 3-4 ವರ್ಷಗಳಿಂದ ಸಾರಿಗೆ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರದ ಶಕ್ತಿ ಯೋಜನೆಯ ಉಚಿತ ಪ್ರಯಾಣದಿಂದ ಸಮಸ್ಯೆ ಹೆಚ್ಚಾಗಿದೆ. ಖಾಸಗಿ ಬಸ್, ಕ್ಯಾಬ್, ಆಟೋಗಳಿಗೆ ಪ್ರಯಾಣಿಕರ ತೀವ್ರ ಕೊರತೆ ಎದುರಾಗಿ ನಷ್ಟಕ್ಕೊಳಗಾಗಿದೆ. ಹೀಗಾಗಿ ಪರಿಹಾರ ಕೊಡಬೇಕೆಂದು ಸಂಘಟನೆಗಳು ಹೋರಾಟ ನಡೆಸಿದ್ದವು. ಸಾರಿಗೆ ಸಚಿವರು ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದು, ಸಿಎಂ ಜೊತೆಗೆ ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಪರಿಹಾರ ಕ್ರಮಗಳ ಕುರಿತು ಸಾರಿಗೆ ಇಲಾಖೆಗೆ ವರದಿ ನೀಡಲು ಸಿಎಂ ಸೂಚಿಸಿದ್ದಾರೆ. ವರದಿ ಆಧರಿಸಿ ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.