ಭಾರತ ಸಾಂಬಾರ ಪದಾರ್ಥಗಳಿಗೆ ಹೆಸರುವಾಸಿಯಾದ ದೇಶ. ನೂರಾರು ವರ್ಷಗಳಿಂದ ಇಲ್ಲಿನ ಸಾಂಬಾರ ಪದಾರ್ಥಕ್ಕೆ ಎಲ್ಲಿಲ್ಲದ ಬೇಡಿಕೆ. ಹಲವು ಸಾಂಬಾರ ಪದಾರ್ಥಗಳಲ್ಲಿ ದಾಲ್ಚಿನ್ನಿ ಕೂಡ ಒಂದು. ಬಹಳಷ್ಟು ಜನ ಇದನ್ನು ಚಕ್ಕೆ ಎಂದು ಕರೆಯುತ್ತಾರೆ.
ದಾಲ್ಚಿನ್ನಿ ಮೂಲತಃ ಮರದ ತೊಗಟೆ. ಚಕ್ಕೆಯ ರೂಪದಲ್ಲೇ ಇರುವದರಿಂದ ದಾಲ್ಚಿನ್ನಿ ಚಕ್ಕೆ ಎಂದು ಕರೆಯುತ್ತಾರೆ. ಮಾರುಕಟ್ಟೆಯಲ್ಲಿ ಎರಡು ಬಗೆಯ ದಾಲ್ಚಿನ್ನಿ ಕಾಣಸಿಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ವ್ಯತ್ಯಾಸ ತಿಳಿಯುತ್ತದೆ.
ಸಿನ್ನಮೋಮಮ್ ಕ್ಯಾಶಿಯ (Cinnamomum cassia) ಇದು ಸಾಮಾನ್ಯವಾಗಿ ಎಲ್ಲಾ ಕಡೆ ಕಂಡು ಬರುವ ಚೀನಾ ಮೂಲದ ದಾಲ್ಚಿನ್ನಿ. ಇದು ಬೆಲೆ ಹಾಗೂ ಸತ್ವ ಎರಡೂ ಕಡಿಮೆ ಇರುವ ಪದಾರ್ಥ.
ಸಿನ್ನಮೋಮಮ್ ವೆರಂ (Cinnamomum verum ) ಎಂಬುದೇ ಅಸಲಿ ದಾಲ್ಚಿನ್ನಿ. ಇದರ ಮೂಲ ಶ್ರೀಲಂಕಾದ ಸಿಲೋನ್. ಕೇರಳದಲ್ಲೂ ಇದರ ಉತ್ಪಾದನೆ ಇದೆ. ಇದಲ್ಲದೆ ಇನ್ನೂ ಹಲವು ಪ್ರಬೇಧಗಳು ಲಭ್ಯವಿದ್ದರೂ ಪ್ರಮುಖವಾಗಿ ಇವೆರಡೂ ಬಗೆಯ ದಾಲ್ಚಿನ್ನಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.
ಅಸಲಿ ದಾಲ್ಚಿನ್ನಿ ತೀಕ್ಷ್ಣವಾದ ಘಾಟು ಹೊಂದಿಲ್ಲ. ಒಳ್ಳೆಯ ಪರಿಮಳ ಹಾಗೂ ಕಂದು ಬಣ್ಣದ್ದಾಗಿರುತ್ತದೆ. ನೋಡಲು ಸುರುಳಿ ಆಕಾರದಲ್ಲಿ ಇರುತ್ತದೆ.
ಚೀನಾ ಮೂಲದ ದಾಲ್ಚಿನ್ನಿ ಮರದ ಚಕ್ಕೆಯ ರೂಪದಲ್ಲಿ ಇರುತ್ತದೆ. ತೀಕ್ಷ್ಣವಾದ ಘಾಟು ಹಾಗೂ ಸ್ವಲ್ಪ ಕೆಂಪು ಬಣ್ಣ ಇದಕ್ಕಿದೆ. ದಾಲ್ಚಿನ್ನಿ ಆಯ್ಕೆ ಮಾಡುವಾಗ ಈ ಸೂಕ್ಷ್ಮ ವ್ಯತ್ಯಾಸವನ್ನು ಗಮನಿಸಿ ಆಯ್ಕೆ ಮಾಡುವುದನ್ನು ಮರೆಯದಿರಿ.