ಬೆಂಗಳೂರು: ನಾವು ಕಮಿಷನ್ ಹಿಂದೆ ಬಿದ್ದಿಲ್ಲ, ಕಮಿಷನ್ ಹಗರಣಗಳ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿಯನ್ನೇ ಮಾಡದೇ ಹಳೆಯ ಕೆಲಸಕ್ಕೆ ಹಾಗೂ ಕೆಲವು ಕಡೆ ಅರ್ಧಂಬರ್ಧ ಕೆಲಸ ಮಾಡಿಸಿ ಬಿಲ್ ನ ಮೊತ್ತವನ್ನು ಪಡೆಯಲಾಗಿದೆ. ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿ ಈ ಹಗರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಪೂರ್ಣ ವರದಿ ಬರುವ ಮೊದಲೇ ಬಾಕಿ ಇರುವ ಬಿಲ್ ಗಳಿಗೆ ಹಣ ಬಿಡುಗಡೆ ಮಾಡುವುದು ಸಮಂಜಸವಲ್ಲ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಬಾಕಿ ಬಿಲ್ ಹಣ ಪಾವತಿ ಮಾಡುತ್ತಿಲ್ಲ. ಹೀಗಾಗಿ ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡಿ ಬಿಲ್ ಬಿಡುಗಡೆ ಮಾಡಿಸಬೇಕು ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಆದರೆ ರಾಜ್ಯ ಸರ್ಕಾರಗಳಿಗೆ ಸೂಚನೆ, ನಿರ್ದೇಶನ ನೀಡುವ ಅಧಿಕಾರವಿರುವುದು ದೇಶದ ಪ್ರಧಾನಿಯವರಿಗೆ. ಪ್ರಧಾನಿಯವರು ಮಾಡಬೇಕಿರುವ ಕೆಲಸವನ್ನು ರಾಹುಲ್ ಗಾಂಧಿಯವರಿಗೆ ಮಾಡಿ ಎಂದು ಒತ್ತಾಯಿಸುತ್ತಿರುವುದು ನೋಡಿದರೆ ಸ್ವತಃ ಬೊಮ್ಮಾಯಿವರಿಗೆ ಮೋದಿಯವರ ಕಾರ್ಯದಕ್ಷತೆ ಬಗ್ಗೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ ಎಂದು ಟಾಂಗ್ ನೀಡಿದ್ದಾರೆ.
ನ್ಯಾಯಯುತವಾಗಿ ಕಾಮಗಾರಿ ಮಾಡಿದ ಯಾವೊಬ್ಬ ಗುತ್ತಿಗೆದಾರನಿಗೂ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಭಯ ಬೇಡ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ.