ಗದಗ: ನಗರಸಭೆ ಕಂದಾಯಾಧಿಕಾರಿಯೊಬ್ಬರು ಸಸ್ಪೆಂಡ್ ಆದ 15 ದಿನಗಳಲ್ಲಿಯೇ ಮುಖ್ಯಾಧಿಕಾರಿಯಾಗಿ ಬಡ್ತಿ ಪಡೆದು ನೇಮಕಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಗದಗ ನಗರಸಭೆ ಕಂದಾಯ ಅಧಿಕಾರಿಯಾಗಿದ್ದ ಮಹೇಶ್ ಹಡಪದ ಎಂಬುವವರು ಜುಲೈ 25ರಂದು ಸಸ್ಪೆಂಡ್ ಆಗಿದ್ದರು. ನಿಯಮ ಬಾಹಿರವಾಗಿ 1,063 ನಿವೇಶನಗಳಿಗೆ ಫಾರ್ಮ್ ನಂ.3 ವಿತರಿಸಿ ಕರ್ತವ್ಯ ಲೋಪವೆಸಗಿದ್ದ ಕಾರಣಕ್ಕೆ ಮಹೇಶ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಆದೇಶ ಹೊರಡಿಸಿದ್ದರು.
ಸಸ್ಪೆಂಡ್ ಆಗಿದ್ದ ಮಹೇಶ್ ಹಡಪದ ಈಗ ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣ ಪಂಚಾಯಿತಿಗೆ ಮುಖ್ಯಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿ ಸಾರ್ವಜನಿಕರಿಗೆ ನಿವೇಶನ ಹಂಚಿದ್ದ ಅಧಿಕಾರಿಯನ್ನು ಅಮಾನತುಗೊಳಿಸಿದ ಬೆನ್ನಲೇ ಬಡ್ತಿ ನೀಡಿ ನಿಯೋಜನೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಮತ್ತಷ್ಟು ಬಲಬಂದಂತಾಗಿದೆ.