ಹಾಸನ: ದೇವಾಲಯಕ್ಕೆ ಹೋಗಿದ್ದ ಪರಿಶಿಷ್ಟ ಸಮುದಾಯದ ವ್ಯಕ್ತಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಲಾಗಿದೆ. ಈ ಕುರಿತು ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕುರಗುಂದ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಪರಿಶಿಷ್ಟ ಸಮುದಾಯದ ರವಿಸಿದ್ದಯ್ಯ ಎಂಬುವರು ಹೋಗಿದ್ದಾರೆ. ಆಗಸ್ಟ್ 5ರಂದು ಅವರು ದೇವರ ದರ್ಶನಕ್ಕೆ ಹೋದ ಸಂದರ್ಭದಲ್ಲಿ ಅದೇ ಗ್ರಾಮದ ಹೇಮಂತ್, ಪ್ರವೀಣ್, ರಮೇಶ್ ರೆಡ್ಡಿ, ಪ್ರತಾಪ್, ಮಹಾದೇವಪ್ಪ ಮೊದಲಾದವರು ತಡೆಯೊಡ್ಡಿದ್ದಾರೆ.
ರವಿಸಿದ್ದಯ್ಯ ಅವರ ಕುತ್ತಿಗೆ ಬಿಗಿದು ಕೆಳಕ್ಕೆ ಕೆಡವಿ ಕಾಲಿನಿಂದ ತುಳಿದು ರಸ್ತೆ ಮೇಲೆ ಎಳೆದಾಡಿ ಎಂಜಲು ಎಲೆಗಳನ್ನು ಮೈ ಮೇಲೆ ಹಾಕಿದ್ದಾರೆ. ಬಟ್ಟೆಗಳನ್ನು ಹರಿದು ಅರೆಬೆತ್ತಲೆ ಮಾಡಿ ದೊಣ್ಣೆಗಳಿಂದ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ದೇವಾಲಯಕ್ಕೆ ಬಂದರೆ ಮನೆಗೆ ಬೆಂಕಿ ಹಾಕುವುದಾಗಿ ಬೆದರಿಕೆ ಹಾಕಿದ್ದು, ಯಾರೂ ಅನ್ನ ನೀರು ಕೊಡಬೇಡಿ ಎಂದು ಬಹಿಷ್ಕಾರ ಹಾಕಿದ್ದಾರೆ ಎಂದು ಆ. 7 ರಂದು ಜಾವಗಲ್ ಠಾಣೆಗೆ ದೂರು ನೀಡಲಾಗಿದೆ.