ಬೆಂಗಳೂರು: ‘ಹವಾನಾ ಸಿಂಡ್ರೋಮ್’ ಎಂಬ ಕಾಯಿಲೆ ಭಾರತದಲ್ಲಿಯೂ ಕಂಡುಬರುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹವಾನಾ ಸಿಂಡ್ರೋಮ್ ವಿಚಾರವಾಗಿ ಎ.ಅಮರನಾಥ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ, ಮೂರು ತಿಂಗಳ ಒಳಗೆ ಪರಿಶೀಲನೆ ನಡೆಸುವಂತೆ ಸೂಚಿಸಿದೆ.
ಹವಾನಾ ಸಿಂಡ್ರೋಮ್ ಎಂಬುದು ಒಂದು ನಿಗೂಢವಾದ ಹಾಗೂ ನರವೈಜ್ಞಾನಿಕ ಕಾಯಿಲೆ. ಪ್ರಪಂಚದ ಹಲವು ಭಾಗಗಳಲ್ಲಿ ಈ ಕಾಯಿಲೆ ಪತ್ತೆಯಾಗಿದ್ದು, ಪ್ರಮುಖವಾಗಿ ಅಮೆರಿಕಾದ ರಾಜತಾಂತ್ರಿಕರು ಮತ್ತು ಗೂಢಚಾರರು ಇದರಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ರೋಗದ ಲಕ್ಷಣ ಮೈಗ್ರೇನ್, ವಾಕರಿಕೆ, ನೆನಪಿನ ಕೊರತೆ ಹಾಗೂ ತಲೆ ತಿರುಗುವಿಕೆ. 2016ರಲ್ಲಿ ಕ್ಯೂಬಾದಲ್ಲಿ ನಿಯೋಜಿಸಲ್ಪಟ್ಟಿದ್ದ ಅಮೆರಿಕಾದ ರಾಯಭಾರ ಕಛೆರಿಯ ಅಧಿಕಾರಿಗಳಲ್ಲಿ ಈ ರೊಗ ಲಕ್ಷಣಗಳು ಮೊದಲ ಬಾರಿ ಕಾಣಿಸಿಕೊಂಡಿತ್ತು. ಈ ಹಿನೆಲೆಯಲ್ಲಿ ಈ ಕಾಯಿಲೆಗೆ ಹವಾನಾ ಸಿಂಡ್ರೋಮ್ ಎಂದು ಹೆಸರಿಡಲಾಗಿದೆ. ಈ ರೋಗವು ಎಲೆಕ್ಟ್ರೋಮ್ಯಾಗ್ನೆಟಿಕ್ ಎನರ್ಜಿಯು ರೇಡಿಯೋ ವೇವ್ಸ್ ಮೂಲಕ ತಗುಲಿ ಉಂಟಾಗುತ್ತದೆ.
ಹವಾನಾ ಸಿಂಡ್ರೋಮ್ ಭಾರತದಲ್ಲಿ ಮೊದಲ ಬಾರಿ 2021ರಲ್ಲಿ ವರದಿಯಾಗಿತ್ತು. ಈ ವೇಳೆ ಅಮೆರಿಕದ ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಹಾಗೂ ಗುಪ್ತಚರ ಅಧಿಕಾರಿ ಭರತಕ್ಕೆ ಭೇಟಿ ನೀಡಿದ್ದರು. ಆ ಗುಪ್ತಚರ ಅಧಿಕಾರಿ ಹವಾನಾ ಸಿಂಡ್ರೋಮ್ ಲಕ್ಷಣಗಳನ್ನು ಹೊಂದಿದ್ದರು ಎನ್ನಲಾಗಿತ್ತು. ಆದರೆ ರಕ್ಷಣಾ ಇಲಾಖೆ ಮೂಲಗಳು ಇದನ್ನು ನಿರಾಕರಿಸಿದ್ದವು. ಭಾರತದಲ್ಲಿ ಇಂತಹ ರೋಗ ಲಕ್ಷಣ ಈವರೆಗೆ ಪತ್ತೆಯಾಗಿಲ್ಲ. ಆದರೆ ಹವಾನಾ ಸಿಂಡ್ರೋಮ್ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಭಾರತದ ಭೂ ಪ್ರದೇಶದಲ್ಲಿ ಇಂತಹ ರೋಗ ತಡೆಯಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅಮರನಾಥ್ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.