ನವದೆಹಲಿ: ಇಂಟರ್ ನೆಟ್ ಸಂಪರ್ಕವಿಲ್ಲದೇ ಮೊಬೈಲ್ ನಲ್ಲಿ ಟಿವಿ ಚಾನೆಲ್ ವೀಕ್ಷಿಸುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರ ಪರಾಮರ್ಶೆ ನಡೆಸಿದೆ.
ಡೈರೆಕ್ಟ್ ಟು ಮೊಬೈಲ್(ಡಿ2ಎಂ) ತಂತ್ರಜ್ಞಾನದ ಸಾಮರ್ಥ್ಯವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದ್ದು, ಇದು ಸಾಧ್ಯವಾದಲ್ಲಿ ಮೊಬೈಲ್ ಬಳಕೆದಾರರು ಇಂಟರ್ನೆಟ್ ಸಂಪರ್ಕವಿಲ್ಲದೆ ತಮ್ಮ ಸ್ಮಾರ್ಟ್ಫೋನ್ ಗಳಲ್ಲಿ ಲೈವ್ ಟಿವಿ ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ.
ದೇಶದಲ್ಲಿ 80 ಕೋಟಿಗೂ ಅಧಿಕ ಮೊಬೈಲ್ ಬಳಕೆದಾರರಿದ್ದು, ಅವರಿಗೆ ಶೈಕ್ಷಣಿಕ ನೆರವು, ತುರ್ತು ಎಚ್ಚರಿಕೆ ನೀಡಲು ಡೈರೆಕ್ಟ್ ಟು ಮೊಬೈಲ್ ತಂತ್ರಜ್ಞಾನ ಬಳಸಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಡೈರೆಕ್ಟ್ ಟು ಮೊಬೈಲ್ ನಿಂದ ಟೆಲಿಕಾಂ ಕಂಪನಿಗಳ ಡೇಟಾ ಆದಾಯ ಕುಸಿಯುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರದ ಈ ಪ್ರಸ್ತಾವನೆಗೆ ಟೆಲಿಕಾಂ ಆಪರೇಟರ್ ಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಮುಂದಿನ ವಾರ ಸರ್ಕಾರ ಈ ಕುರಿತಾಗಿ ಮಹತ್ವದ ಸಭೆ ನಡೆಸಲಿದ್ದು, ಟೆಲಿಕಾಂ ಇಲಾಖೆ, ಬ್ರಾಡ್ಕಾಸ್ಟ್ ಉದ್ಯಮ, MIB, IIT ಕಾನ್ಪುರ್ ಸೇರಿದಂತೆ ವಿವಿಧ ವಲಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ನೆಟ್ ಇಲ್ಲದೇ ಮೊಬೈಲ್ ನಲ್ಲಿ ಟಿವಿ ಚಾನೆಲ್ ವೀಕ್ಷಣೆ ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಲಾಗಿದೆ.