ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಸಿಇಟಿ ಬರೆದಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ನಿರಾಕ್ಷೇಪಣಾ ಪ್ರಮಾಣ ಪತ್ರ ಸೇರಿದಂತೆ ಕೆಲವು ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಹಂಚಿಕೆ ಪಟ್ಟಿಯಿಂದ ಕೈಬಿಟ್ಟಿದ್ದ 9000 ಸೀಟುಗಳನ್ನು ಮತ್ತೆ ಸೇರ್ಪಡೆ ಮಾಡಲಾಗಿದೆ.
ಶುಕ್ರವಾರದಂದು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಜೊತೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದು, ಕೆಲ ಷರತ್ತುಗಳ ಆಧಾರದಲ್ಲಿ ಸೀಟು ಹಂಚಿಕೆಗೆ ಸಮ್ಮತಿಸಲಾಗಿದೆ. ಅಲ್ಲದೆ ನಿಗದಿತ ಅವಧಿಯೊಳಗೆ ಕಾಲೇಜು ಆಡಳಿತ ಮಂಡಳಿಗಳು ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.
ಈ ಮೊದಲು ಒಟ್ಟು 9000 ಎಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚರ್ ಸೀಟುಗಳನ್ನು ಸಿಇಟಿ ಅಂತಿಮ ಹಂಚಿಕೆ ಪಟ್ಟಿಯಿಂದ ಕೈ ಬಿಡಲಾಗಿದ್ದು, ಸೀಟು ಕೈ ಬಿಡಲಾದ ಕಾಲೇಜುಗಳ ಪೈಕಿ ಆರ್ ವಿ ಎಂಜಿನಿಯರಿಂಗ್ ಕಾಲೇಜ್, ಎಂಎಸ್ ರಾಮಯ್ಯ, ದಯಾನಂದ ಸಾಗರ್, ಬಿಎಂಎಸ್ ಸೇರಿದಂತೆ ಹಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿದ್ದವು. ಶುಕ್ರವಾರದಂದು ನಡೆದ ಮಾತುಕತೆ ಬಳಿಕ ಈ ಸೀಟುಗಳ ಹಂಚಿಕೆಗೆ ಒಪ್ಪಿಗೆ ಸೂಚಿಸಲಾಗಿದೆ.