ಶ್ರಮದ ದುಡಿಮೆ ಒಂದಲ್ಲ ಒಂದು ದಿನ ಕೈಹಿಡಿಯಲಿದೆ ಎಂಬ ನಾಣ್ಣುಡಿಗೆ ಉದಾಹರಣೆ ಇಲ್ಲೊಂದಿದೆ. ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ ಕಲ್ಲು ಒಡೆಯುತ್ತಾ ದಿನಕ್ಕೆ 40 ರೂ. ಗಳಿಸುತ್ತಾ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಬಾಲಕನೊಬ್ಬ ಇಂದು ದೊಡ್ಡ ಸಾಮ್ರಾಜ್ಯ ಕಟ್ಟಿದ್ದಾರೆ.
ಅವರ ಹೆಸರು ನಿತಿನ್ ಗೋಡ್ಸೆ. ಎಕ್ಸೆಲ್ ಗ್ಯಾಸ್ ಮತ್ತು ಸಲಕರಣೆಗಳ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸಾಧನೆಯ ರೋಚಕ ಕಥೆ ಇಲ್ಲಿದೆ.
ನಿತಿನ್ ಗೋಡ್ಸೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಅಕೋಲೆ ಎಂಬ ಸಣ್ಣ ಹಳ್ಳಿಯಿಂದ ಬಂದವರು. ತಿಂಗಳಿಗೆ 400 ರೂ.ಗಳ ಆದಾಯದೊಂದಿಗೆ, ಅವರ ತಂದೆ ಸ್ಥಳೀಯ ಅಂಗಡಿಯಲ್ಲಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದರು. ತಂದೆಯ ಮಾಸಿಕ ವೇತನವು ಅವರ ಕುಟುಂಬದ ಅಗತ್ಯಗಳಿಗೆ ಸಾಕಾಗುವುದಿಲ್ಲ.
ಆದ್ದರಿಂದ, ಚಿಕ್ಕ ವಯಸ್ಸಿನಲ್ಲೇ, ಅವರು ತಮ್ಮ ತಂದೆ ಮತ್ತು ಕುಟುಂಬದ ಆರ್ಥಿಕ ಬೆಂಬಲಕ್ಕಾಗಿ ಸಣ್ಣ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು. ಅವರು 6 ನೇ ತರಗತಿಯಲ್ಲಿದ್ದಾಗ ಅವರು ಹತ್ತಿರದಲ್ಲೇ ಕೃಷಿ ಚಟುವಟಿಕೆ, ಬಂಡೆಗಳನ್ನು ಒಡೆಯುವುದು, ಬಾವಿಗಳನ್ನು ತೋಡಿ ನಿತ್ಯ 40 ರೂ. ಗಳಿಸುತ್ತಿದ್ದರು.
ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ವ್ಯಾಪಾರ ಮಾಡಲು ಪ್ರಯತ್ನಿಸಿ ಕೋಳಿ ಫಾರಂ ತೆರೆಯಲು ಬಯಸಿ ವಿಫಲರಾದರು. ನಂತರ ಬಿ.ಎಸ್ಸಿ (ಆನರ್ಸ್) ಮಾಡಿದರು. ಪದವಿ ಪಡೆದ ನಂತರ ಓರ್ಕೆ ಇಂಡಸ್ಟ್ರೀಸ್‌ನಲ್ಲಿ ಮೇಲ್ವಿಚಾರಕರಾಗಿ ಮತ್ತು ನಂತರ ಟೆಕ್ನೋವಾ ಇಮೇಜಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡಿದರು. ಅವರ ಪಾಲಿಗೆ ದುಃಖಕರವೆಂದರೆ ವ್ಯಾಪಾರವು ಮುಚ್ಚಲ್ಪಟ್ಟಿತು, ಕೆಲಸವಿಲ್ಲವಾಯಿತು. ನಿತಿನ್ ಇಡೀ ದಿನ ತರಕಾರಿ ಮಾರಾಟದಲ್ಲಿ ಕಳೆದರು.
ನಿತಿನ್ ಗೋಡ್ಸೆ ಎರಡು ತಿಂಗಳ ನಂತರ ಸ್ಪಾನ್ ಗ್ಯಾಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಕಂಪನಿಯ ಸ್ಪಾನ್ ಗ್ಯಾಸ್‌ನಲ್ಲಿ ಅವರ ಅಧಿಕಾರಾವಧಿಯಲ್ಲಿ ವಹಿವಾಟು 2 ಲಕ್ಷದಿಂದ 20 ಲಕ್ಷಕ್ಕೆ ಏರಿತು. ಗೋಡ್ಸೆ ಮುಂದೆ ಹೋಗಿ ತನ್ನದೇ ಆದ ವ್ಯಾಪಾರವನ್ನು ಸ್ಥಾಪಿಸಿದರು. ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ್ಲ.
ಅವರ ಕಂಪನಿಗೆ ದೇಶಾದ್ಯಂತ ಆರ್ಡರ್‌ಗಳು ಬರಲಾರಂಭಿಸಿದವು. ಅವರ ಕಂಪನಿಯು 2000 ರಲ್ಲಿ ಕೇವಲ ಮೂರರಿಂದ ಈಗ ನೂರಾರು ಜನರನ್ನು ನೇಮಿಸಿಕೊಂಡಿದೆ. ಈಗ 25 ಕೋಟಿ ರೂ. ಮೀರಿದ ಸಾಮ್ರಾಜ್ಯ ಸ್ಥಾಪಿಸಿದ್ದಾರೆ.