ಹಾವೇರಿ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷದ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಕೋವಿಡ್ ಸಂದರ್ಭದಲ್ಲಿ ಮಕ್ಕಳು ಮೊಬೈಲ್ ಗೆ ಅಂಟಿಕೊಂಡಿದ್ದೇ ಇದಕ್ಕೆ ಕಾರಣವಿರಬಹುದೇ ಎಂಬ ಆತಂಕವೂ ಇದೆ. ಈ ಮಧ್ಯೆ ಹಾವೇರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಪ್ರಕರಣಗಳು ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಿದೆ.
ಹಾವೇರಿ ಜಿಲ್ಲೆಯಲ್ಲಿ 8000ಕ್ಕೂ ಹೆಚ್ಚು ಮಕ್ಕಳಲ್ಲಿ ದೃಷ್ಟಿದೋಷ ಕಂಡುಬಂದಿದೆ. ಹಾವೇರಿ ಜಿಲ್ಲಾಡಳಿತ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದ್ದು, ಈ ವೇಳೆ ಬರೋಬ್ಬರಿ 8500 ಮಕ್ಕಳಲ್ಲಿ ದೃಷ್ಟಿದೋಷ ಕಂಡುಬಂದಿದೆ. ಕಳೆದ ಮೂರು ವರ್ಷಗಳಿಂದ ಮಕ್ಕಳು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಅಂಧತ್ವ ನಿವಾರಣೆ ಕಾರ್ಯಕ್ರಮದ ಅಡಿಯಲ್ಲಿ ಶಾಲಾ ಮಕ್ಕಳನ್ನು ತಪಾಸಣೆ ಮಾಡಿದಾಗ 8,500 ಮಕ್ಕಳಲ್ಲಿ ದೃಷ್ಟಿದೋಷವಿರುವುದು ಪತ್ತೆಯಾಗಿದೆ. ಹಾವೇರಿಯ 1,796 ಸರ್ಕಾರಿ ಶಾಲೆಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಈ ವಿಚಾರ ಬಯಲಾಗಿದೆ.
2022-23ನೇ ಸಾಲಿನಲ್ಲಿ 4,367 ಮಕ್ಕಳು ಹಾಗೂ 2023-24ನೇ ಸಾಲಿನಲ್ಲಿ 4,114 ಮಕ್ಕಳಲ್ಲಿ ದೃಷ್ಟಿದೋಷ ಪತ್ತೆಯಾಗಿದೆ. ಅಂದರೆ ಒಂದೇ ವರ್ಷದಲ್ಲಿ ಬರೋಬ್ಬರಿ 4 ಸಾವಿರ ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಾಗಿದೆ.
ಕೊರೊನಾ ಸಂದರ್ಭದಲ್ಲಿ ಆರಂಭವಾದ ಆನ್ ಲೈನ್ ತರಗತಿಗಳಿಂದಾಗಿ ಮಕ್ಕಳು ಮೊಬೈಲ್, ಕಂಪ್ಯೂಟರ್ ಉಪಕರಣಗಳಿಗೆ ಮೊರೆ ಹೋಗಿದ್ದಾರೆ. ಡಿಜಿಟಲ್ ಉಪಕರಣಗಳ ಅತಿಯಾದ ಬಳಕೆಯೇ ಮಕ್ಕಳ ಕಣ್ಣಿಗೆ ಮಾರಕವಾಗುತ್ತಿವೆಯೇ? ಎಂಬ ಆತಂಕ ಶುರುವಾಗಿದೆ. ಅಲ್ಲದೇ ಮಕ್ಕಳಲ್ಲಿ ವಿಟಮಿನ್, ಪೌಷ್ಠಿಕ ಆಹಾರದ ಕೊರತೆಯೂ ಈ ಸಮಸ್ಯೆಗೆ ಕಾರಣವಾಗುತ್ತವೆ ಎಂಬುದು ಗಮನಿಸಬೇಕಾದ ಅಂಶ. ಆದರೆ ಹಾವೇರಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲು ನಿಖರ ಕಾರಣವೇನು? ಎಂಬುದು ತಿಳಿದುಬಂದಿಲ್ಲ.