ಪ್ರತಿ ನಿತ್ಯ ತಿಂಡಿ ಅಥವಾ ಅಡುಗೆಗೆ ಒಂದಲ್ಲಾ ಒಂದು ತರಕಾರಿ ಉಪಯೋಗಿಸುತ್ತೇವೆ. ತರಕಾರಿ ಹೆಚ್ಚುವಾಗ ಒಬ್ಬೊಬ್ಬರು ಒಂದೊಂದು ವಿಧಾನ ಅನುಸರಿಸುತ್ತಾರೆ. ಕೆಲವರು ತರಕಾರಿ ತೊಳೆದು ನಂತರ ಹೆಚ್ಚುತ್ತಾರೆ, ಇನ್ನೂ ಕೆಲವರು ತರಕಾರಿಗಳನ್ನು ಹೆಚ್ಚಿ ನಂತರ ನೀರಿನಲ್ಲಿ ಹಾಕುತ್ತಾರೆ. ಇವೆರಡರಲ್ಲಿ ಉತ್ತಮ ವಿಧಾನ ಮೊದಲು ತರಕಾರಿ ತೊಳೆದು ನಂತರ ಹೆಚ್ಚುವುದು. ಹೆಚ್ಚಿದ ತರಕಾರಿ ತೊಳೆದರೆ ನೀರಿನಲ್ಲಿ ಅದರ ಪೋಷಕಾಂಶ ಕರಗಿ ಹೋಗಬಹುದು.
ತರಕಾರಿ ಹೋಳುಗಳು ಚಿಕ್ಕದಾಗಿ ಇರಬೇಕೇ ಅಥವಾ ದಪ್ಪ ಇರಬೇಕೇ? ಇದು ಸಹ ಅನೇಕರಿಗೆ ಕಾಡುವ ಗೊಂದಲ. ತರಕಾರಿಗಳನ್ನು ಸಣ್ಣಗೆ ಹೆಚ್ಚಿದರೆ ಬೇಗ ಬೇಯುತ್ತದೆ ಎಂದು ಸಣ್ಣಗೆ ಹೆಚ್ಚುವವರಿದ್ದಾರೆ. ನಿಜ ಸಣ್ಣಗೆ ತುಂಡು ಮಾಡಿದ ತರಕಾರಿ ಬೇಗ ಬೆಂದು ಗ್ಯಾಸ್ ಉಳಿತಾಯವಾಗಬಹುದು ಆದರೆ ಹೀಗೆ ಮಾಡುವುದರಿಂದ ತರಕಾರಿಯಲ್ಲಿ ಇರುವ ಅತ್ಯಧಿಕ ಜೀವಸತ್ವಗಳು ನಾಶವಾಗುತ್ತದೆ. ಆದಷ್ಟು ಸಿಪ್ಪೆ ಸಮೇತ ತರಕಾರಿಗಳನ್ನು ಬೇಯಿಸುವುದು ಒಳ್ಳೆಯದು.
ತರಕಾರಿಯ ಎಲ್ಲಾ ಭಾಗಗಳೂ ಅಡುಗೆಗೆ ಉಪಯೋಗ ಆಗುವ ಹಾಗೆ ಗಮನ ವಹಿಸಿವುದು ಜಾಣತನ. ತರಕಾರಿಯ ತಿರುಳನ್ನು ಎಸೆಯದೆ ರುಬ್ಬಿ ಬಳಸುವ ವಿಧಾನ ಅನುಸರಿಸಬಹುದು.
ಸಾಗು, ಪಲ್ಯದಂತಹ ಅಡುಗೆಗೆ ಹೋಳು ಸಣ್ಣದಾಗೆ ಇರಬೇಕು. ಆದರೆ ಇವುಗಳನ್ನು ಹೆಚ್ಚು ಮೃದುವಾಗಿ ಬೇಯಿಸದೆ ಇದ್ದರೇ ಒಳ್ಳೆಯದು.
ಸಾಂಬಾರ್ ಮಾಡುವಾಗ ತರಕಾರಿ ಯಾವಾಗಲೂ ದೊಡ್ಡ ಹೋಳುಗಳ ರೂಪದಲ್ಲೇ ಇರಲಿ.