ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ. ರವಿ ಅವರನ್ನು ಈಗ ಆ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಸಿ.ಟಿ. ರವಿಯವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಈಗಾಗಲೇ ಅವಧಿ ಪೂರ್ಣಗೊಳಿಸಿರುವ ನಳೀನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮುಂಬರುವ ಲೋಕಸಭಾ ಚುನಾವಣಾ ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ಈ ತೀರ್ಮಾನ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದ್ದು, ಇದರ ಜೊತೆಗೆ ಈವರೆಗೂ ನೆನೆಗುದಿಗೆ ಬಿದ್ದಿರುವ ವಿಧಾನಸಭಾ ಪ್ರತಿ ಪಕ್ಷ ನಾಯಕನ ಸ್ಥಾನಕ್ಕೂ ಆಯ್ಕೆ ನಡೆಯಲಿದೆ ಎಂದು ಹೇಳಲಾಗಿದೆ.
ಇದರ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿ.ಟಿ. ರವಿ ನೇಮಕಾತಿ ಕುರಿತು ವ್ಯಂಗ್ಯವಾಡಿರುವ ಕಾಂಗ್ರೆಸ್, “ತವರು ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಒಂದೇ ಒಂದು ಕ್ಷೇತ್ರವನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ, ಬೇರೆ ಕ್ಷೇತ್ರವನ್ನು ಗೆಲ್ಲಿಸುವುದಿರಲಿ, ಸ್ವತಃ ತಾವೇ ಹಿನಾಯವಾಗಿ ಸೋತಿದ್ದಾರೆ, ತಮಿಳುನಾಡಿನ ಉಸ್ತುವಾರಿಯಾಗಿ ಮಾಡಿದ ಸಾಧನೆ ಶೂನ್ಯ, ಇಂತಹ ಹಲವು ವೈಫಲ್ಯಗಳ ಸರದಾರ ಸಿಟಿ ರವಿಯನ್ನು ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಲಾಭವಾಗಲಿದೆ ! ಅಕಸ್ಮಾತ್ ಬಿಜೆಪಿ ಅವರಿಗೆ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ನಿರ್ಧಾರ ಕೈಗೊಂಡರೆ ಕಾಂಗ್ರೆಸ್ ಪಕ್ಷ ಸಂತೋಷದಿಂದ ಸ್ವಾಗತಿಸುತ್ತದೆ !” ಎಂದು ಟಾಂಗ್ ನೀಡಿದೆ.