
ಬೆಂಗಳೂರು : ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಟೊಮೆಟೊ ದರ ಮತ್ತೆ ಗಗನಕ್ಕೇರಿದ್ದು, ಕೆಜಿ ಟೊಮೆಟೊ 157 ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ.
ರಾಜ್ಯದಲ್ಲಿ ಮಳೆ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗುತ್ತಿದ್ದು, ಬೆಂಗಳೂರಿನ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ ಬೆಲೆ 160 ರೂ. ಗಡಿ ಸಮೀಪಿದ್ರೆ, ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿಯ ಬಾಕ್ಸ್ ಗೆ 2,700 ರೂ. ಗೆ ಹರಾಜಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ದಾಖಲೆ ಬರೆದಿದೆ.
ಬೆಂಗಳೂರಿನ ವಿವಿಧೆಡೆ ಟೊಮೆಟೊ ದರ ಕೆಜಿಗೆ 135 ರಿಂದ 150 ರೂ. ಇದ್ರೆ, 2ನೇ ದರ್ಜೆ ಟೊಮೆಟೊ 100 ರಿಂದ 120 ರೂ.ವರೆಗೆ ಇತ್ತು. ಮಾಳ್ ಗಳಲ್ಲಿ ಇದಕ್ಕಿಂತ ಸರಾಸರಿ 5 ರೂ. ಹೆಚ್ಚು ದರವಿತ್ತು. ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದ್ರೆ ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ 200 ರೂ. ಗಡಿ ದಾಟುವ ಸಾಧ್ಯತೆ ಇದೆ.