ಮಂಡ್ಯ: ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದು, ಟೊಮೆಟೊ ಬಂಗಾರ ಬೆಳೆದ ರೈತರು ಈ ಬಾರಿ ಬಂಪರ್ ಲಾಭದ ಖುಷಿಯಲ್ಲಿದ್ದಾರೆ. ಆದರೆ ಇಲ್ಲೋರ್ವ ರೈತ ಸಮೃದ್ಧವಾಗಿ ಬೆಳೆದು ನಿಂತಿದ್ದ ಟೊಮೆಟೊ ಬೆಳೆಗಳ ಮೇಲೆ ಕಿಡಿಗೇಡು ಆಸಿಡ್ ಎರಚಿರುವುದನ್ನು ನೋಡಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಕಣ್ಣೀರುಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯಯ ಹಂಗ್ರಾಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ರೈತ ಮಹದೇವಸ್ವಾಮಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಟೊಮೆಟೊ ಬೆಳೆದಿದ್ದು, ಎರಡು ಬಾರಿ ಕಟಾವು ಮಾಡಿ ತಮಿಳುನಾಡಿನ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿದ್ದಾರೆ. ಸ್ವಲ್ಪ ಮಟ್ಟಿನ ಲಾಭವೂ ಬಂದಿದೆ. ಈಗ ಮತ್ತೊಂದು ಕಟಾವಿಗೆ ಸಿದ್ದವಾಗಿದ್ದ ಟೊಮೆಟೊ ಬೆಳೆ ಮೇಲೆ ಕಿಡಿಗೇಡಿಗಳು ಆಸಿಡ್ ಸಿಂಪಡಿಸಿದ್ದು, ಟೊಮೆಟೊ ಗಿಡ-ಹಣ್ಣುಗಳು ಸುಟ್ಟು ಹೋಗುತ್ತಿವೆ.
ಸುಮಾರು 2500 ಟೊಮೆಟೊ ಗಿಡಗಳ ತುಂಬೆಲ್ಲ ಬೆಳೆಗಳು ಬಂದಿದ್ದವು. ತಮಿಳುನಾಡಿಗೆ ಹೋಗಿ ಟೊಮೆಟೊ ಮಾರಾಟ ಮಾಡಿ ವಾಪಸ್ ಬರುವಷ್ಟರಲ್ಲಿ ದುಷ್ಕರ್ಮಿಗಳು ಟೊಮೆಟೊ ಗಿಡಗಳ ಮೇಲೆ ಆಸಿಡ್ ಮಿಶ್ರಿತ ನೀರು ಎರಚಿದ್ದಾರೆ. ವಾಪಸ್ ಬಂದು ತೋಟಕ್ಕೆ ಹೋದಾಗಲೇ ವಿಷಯ ಗೊತ್ತಾಗಿದೆ. ಟೊಮೆಟೊ ಗಿಡ, ಹಣ್ಣುಗಳು ಒಣಗುತ್ತಿವೆ. ಇದನ್ನು ಕಂಡು ರೈತ ಕಂಗಾಲಾಗಿದ್ದಾನೆ. ಅರ್ಧ ಎಕರೆ ಜಮೀನಿನಲ್ಲಿ ಅಲ್ಲಲ್ಲಿ ಆಸಿಡ್ ಎರಚಲಾಗಿದ್ದು, ಉಳಿದೆಡೆ ಇರುವ ಟೊಮೆಟೊ ಚನ್ನಾಗಿಯೇ ಇದೆ. ಆಸಿಡ್ ದಾಳಿಯಿಂದ ನಾಶವಾಗಿರುವ ಗಿಡಗಳು ಹಾಗೂ ಮಣ್ಣನ್ನು ತಪಾಸಣೆ ನಡೆಸಲು ರೈತ ಮುಂದಾಗಿದ್ದಾರೆ.
ಸಾಲಮಾಡಿ ಟೊಮೆಟೊ ಬೆಳೆ ಬೆಳೆದು ಇನ್ನೇನು ಫಸಲು ಕೈಗೆ ಬಂದಿದೆ ಎನ್ನುವಷ್ಟರಲ್ಲಿ ದುಷ್ಕರ್ಮಿಗಳು ಕಳ್ಳತನ, ಆಸಿಡ್ ದಾಳಿಯಂತಹ ಕೃತ್ಯ ನಡೆಸಿ ರೈತರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡುತ್ತಿದ್ದಾರೆ. ಇಂತಹ ಘಟನೆಯಿಂದ ರೈತರು ಆತಂಕಕ್ಕೀಡಾಗಿದ್ದಾರೆ.