ಹುಬ್ಬಳ್ಳಿ; ಶಕ್ತಿ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದ್ದು, ಆಟೋ, ಕ್ಯಾಬ್, ಟ್ಯಾಕ್ಸಿಗಳಲ್ಲಿ ಓಡಾಡುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಆಟೋ, ಕ್ಯಾಬ್ ಚಾಲಕರಿಗೆ, ಮಾಲೀಕರಿಗೆ ಹೊಡೆತ ಬಿದ್ದಿದೆ.
ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದನ್ನು ಖಂಡಿಸಿ ಜುಲೈ 31ರಂದು ಇಂದು ಆಟೋ ಚಾಲಕರು ಹುಬ್ಬಳ್ಳಿ-ಧಾರವಾಡದಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಆಟೋ ಚಾಲಕರು ಆಟೋಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಿದ್ದು, ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಆಟೋ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಆಟೋ ಚಾಲಕರ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ಸಾಥ್ ನೀಡಲಿವೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದು, ಆಟೋ, ಕ್ಯಾಬ್ ಗಳನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. ಇದರಿಂದಾಗಿ ಆಟೋ ಚಾಲಕರ ಬದುಕು ದುಸ್ಥರವಾಗಿದೆ ಎಂಬುದು ಆಟೋ ಚಾಲಕರು, ಮಾಲೀಕರ ಅಳಲು.