ಶಿವಮೊಗ್ಗ: ಪ್ರವಾಸಿಗರು ಹಾಗೂ ಚಾರಣಕ್ಕೆ ತೆರಳುವವರಿಗೆ ರಾಜ್ಯ ವನ್ಯಜೀವಿ ಸಂರಕ್ಷಣಾ ವಿಭಾಗ ಬಿಗ್ ಶಾಕ್ ನೀಡಿದೆ. ಪ್ರಸಿದ್ಧ ಪ್ರವಾಸಿ ತಾಣ, ಚಾರಣಿಗರಿಗೆ ಇಷ್ಟವಾದ ಸ್ಥಳ ಕೊಡಚಾದ್ರಿ ಬೆಟ್ಟಕ್ಕೆ ಇಂದಿನಿಂದ ಪ್ರವೇಶ ನಿಷೇಧಿಸಲಾಗಿದೆ.
ಕರಾವಳಿ, ಮಲೆನಾಡಿನಾದ್ಯಂತ ಭಾರಿ ಮಳೆಯಿಂದಾಗಿ ಭೂ ಕುಸಿತ, ಗುಡ್ಡ ಕುಸಿತದಂತಹ ಅವಘಡಗಳು ಹೆಚ್ಚುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರವಾಸಿ ತಾಣ ಕೊಡಚಾದ್ರಿಗೆ ಇಂದಿನಿಂದ ಮುಂದಿನ ಆದೇಶದವರೆಗೂ ಪ್ರವಾಸಿಗರು, ಚಾರಣ ಮಾಡುವವರಿಗೆ, ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಿ ವನ್ಯಜೀವಿ ವಿಭಾಗ ಆದೇಶ ಹೊರಡಿಸಿದೆ.
ಇದರಿಂದಾಗಿ ಕೊಡಚಾದ್ರಿ ಬೆಟ್ಟಕ್ಕೆ ನಿಟ್ಟೂರು, ಸಂಪೆಕಟ್ಟೆ, ಕಟ್ಟಿನಹೊಳೆಯಿಂದ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಚಾಲಕರಿಗೆ ಹೊಡೆತ ಬಿದ್ದಂತಾಗಿದೆ.
ಇನ್ನು ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೂ ನಿರ್ಬಂಧ ವಿಧಿಸಲಾಗಿದೆ. ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಗುಡ್ದ ಕುಸಿತವಾಗುತ್ತಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ. ಮುಳ್ಳಯ್ಯನಗಿರಿ, ದತಪೀಠಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.