ಶಿವಮೊಗ್ಗ: ಭದ್ರಾವತಿ ಆಕಾಶವಾಣಿಗೆ ಎಫ್.ಎಂ.ರೆಡಿಯೋ ಮಂಜೂರಾಗಿದ್ದು, ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಭದ್ರಾವತಿ ಎಫ್.ಎಂ.ರೆಡಿಯೋ ಆರಂಭವಾಗಲಿದೆ.
ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದು, ಭದ್ರಾವತಿ ಎಫ್.ಎಂ.ರೆಡಿಯೋಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು ಅತಿ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಭದ್ರಾವತಿಗೆ ಎಫ್.ಎಂ.ರೆಡಿಯೋ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದೆವು. ಅದರಂತೆ ಎಫ್.ಎಂ.ರೆಡಿಯೋಗೆ ಅನುಮತಿ ಸಿಕ್ಕಿದೆ. ಭದ್ರಾವತಿ ಎಫ್.ಎಂ.ರೆಡಿಯೋ ಮೂಲಕ ಶಿವಮೊಗ್ಗದ ಚಿತ್ರಣವನ್ನು ಜಗತ್ತಿನ ಮುಂದಿಡಲು ಪ್ರಯತ್ನಿಸಲಾಗುವುದು ಎಂದರು.
10 ಕಿಲೋ ವ್ಯಾಟ್ ಟ್ರಾನ್ಸ್ ಮೀಟರ್ ಅಳವಡಿಕೆಗೆ ಅವಕಾಶ ಕಲ್ಪಿಸಿದೆ. ಇದಕ್ಕೆ ಕೇಂದ್ರ ಸರ್ಕಾರ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಹಾಲಿ ಭದಾವತಿಯ ಆಕಾಶವಾಣಿ ಕೇಂದ್ರದಲ್ಲಿ 1 ಕಿಲೋ ವ್ಯಾಟ್ ಇದೆ. 10 ಕಿಲೋ ವ್ಯಾಟ್ ಗೆ ಪ್ರಸಾರ ಭಾರತಿ ಅವಕಾಶ ಮಾಡಿಕೊಟ್ಟಿದೆ. ಟ್ರಾನ್ಸ್ ಮೀಟರ್ ನ್ನು ಶಿವಮೊಗ್ಗದ ವಿದ್ಯಾನಗರದ ದೂರದರ್ಶನ ಟವರ್ ಮೇಲೆ ಅಳವಡಿಸಲಾಗುತ್ತದೆ. ಪ್ರಸಾರ, ರೆಕಾರ್ಡಿಂಗ್ ಎಲ್ಲವೂ ಭದ್ರಾವತಿಯಲ್ಲಿ ನಡೆಯಲಿದೆ. ಇನ್ನು ಭದ್ರಾವತಿ ಆಕಾಶವಾಣಿ ಕೇಂದ್ರ ಎಂದಿನಂತೆಯೇ ಮುಂದುವರಿಯಲಿದೆ ಎಂದು ವಿವರಿಸಿದ್ದಾರೆ.