ಗ್ಯಾಂಗ್ ಟಕ್: ಸಿಕ್ಕಿಂ ಸರ್ಕಾರಿ ಮಹಿಳಾ ನೌಕರರಿಗೆ ಒಂದು ವರ್ಷ ಹೆರಿಗೆ ರಜೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ತಿಳಿಸಿದ್ದಾರೆ.
ಸಿಕ್ಕಿಂ ರಾಜ್ಯ ಸೇವಾ ಅಧಿಕಾರಿಗಳ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪ್ರೇಮ್ ಸಿಂಗ್ ಅವರು, ಮಹಿಳಾ ಸರ್ಕಾರಿ ನೌಕರರಿಗೆ ಒಂದು ವರ್ಷ ಹೆರಿಗೆ ರಜೆ, ಪುರುಷ ಸರ್ಕಾರಿ ನೌಕರರಿಗೆ ಒಂದು ತಿಂಗಳು ಪಿತೃತ್ವ ರಜೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಯೋಜನೆ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ಸರ್ಕಾರಿ ನೌಕರರು ತಮ್ಮ ಮಕ್ಕಳು, ಕುಟುಂಬದ ಬಗ್ಗೆ ಕಾಳಜಿ ವಹಿಸಲು ಅನುಕೂಲವಾಗುವ ಈ ಯೋಜನೆಯ ಕುರಿತಾಗಿ ಹೆಚ್ಚಿನ ವಿವರಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಹೆರಿಗೆ ಪ್ರಯೋಜನ ಕಾಯಿದೆ 1961 ರ ಪ್ರಕಾರ, ಕೆಲಸ ಮಾಡುವ ಮಹಿಳೆಯರು 6 ತಿಂಗಳು ಅಥವಾ 26 ವಾರಗಳ ವೇತನ ಸಹಿತ ಹೆರಿಗೆ ರಜೆಗೆ ಅರ್ಹಳಾಗಿದ್ದಾರೆ. ಹಿಮಾಲಯನ್ ರಾಜ್ಯವು ಭಾರತದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ, ಸುಮಾರು 6.32 ಲಕ್ಷ ಜನಸಂಖ್ಯೆ ಇದೆ. ಸಿಕ್ಕಿಂ ಮತ್ತು ಅದರ ಜನರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವ ಅಧಿಕಾರಿಗಳು ರಾಜ್ಯದ ಆಡಳಿತದ ಬೆನ್ನೆಲುಬು ಎಂದು ತಮಾಂಗ್ ಹೇಳಿದರು.