ಬೆಂಗಳೂರು: ಅಕ್ಕಿ ಪಡೆಯದ ಬಿಪಿಎಲ್ ಕಾರ್ಡ್ ದಾರರನ್ನು ಪತ್ತೆ ಮಾಡಿ ಅಕ್ಕಿ ವಿತರಣೆಯಿಂದ ಹೊರಗಿಡಲಾಗುವುದು. ಇದಕ್ಕಾಗಿ ಮನೆಮನೆ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿರುವ 1.28 ಕೋಟಿ ಬಿಪಿಎಲ್ ಕಾರ್ಡ್ ಗಳ ಪೈಕಿ ಅಂದಾಜು 8 ಲಕ್ಷ ಕಾರ್ಡ್ ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆದುಕೊಳ್ಳುತ್ತಿಲ್ಲ. ಅಂತವರನ್ನು ಪತ್ತೆ ಹಚ್ಚಿ ಉಚಿತ ಅಕ್ಕಿ ವಿತರಣೆಯಿಂದ ಹೊರಗಿಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಅನೇಕ ತಿಂಗಳಿಂದ ಹಲವು ಬಿಪಿಎಲ್ ಕಾರ್ಡ್ದಾರರು ಅಕ್ಕಿ ಪಡೆದಿಲ್ಲ. ಕೇವಲ ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ ಮತ್ತಿತರ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಬಳಸುತ್ತಿದ್ದಾರೆ. ಅಗತ್ಯವಿಲ್ಲದವರ ಹೆಸರಿನಲ್ಲಿ ಅಕ್ಕಿ ದುರ್ಬಳಕೆ ಆಗುತ್ತಿದ್ದು, ಇದನ್ನು ತಡೆಯಲಾಗುವುದು. ಕಳೆದ ಮೂರು ತಿಂಗಳಿಂದ ಪಡಿತರ ಅಕ್ಕಿ ಪಡೆಯದ ಬಿಪಿಎಲ್ ಕಾರ್ಡ್ ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ ನೀಡುವ ನಗದು ವರ್ಗಾವಣೆ ಮಾಡುವುದಿಲ್ಲ ಎಂದು ಹೇಳಲಾಗಿದೆ.
ವಿವಿಧ ಕಾರಣಗಳಿಂದ ಕೆಲವರು ಅಕ್ಕಿ ಪಡೆದುಕೊಳ್ಳುತ್ತಿಲ್ಲ. ಅಕ್ಕಿ ಪಡೆದುಕೊಂಡರೂ ಬೇರೆಯವರಿಗೆ ನೀಡುವುದು, ಕಾಳಸಂತೆಯಲ್ಲಿ ಮಾರಾಟ ಮಾಡುವುದು ನಡೆಯುತ್ತಿದ್ದು, ಇಂತಹ ದುರ್ಬಳಕೆ ತಡೆಯಲು ಅಗತ್ಯವಿರುವವರಿಗೆ ಮಾತ್ರ ಅಕ್ಕಿ ವಿತರಿಸಲು ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಅಕ್ಕಿ ಪಡೆಯಲು ಎಷ್ಟು ಮಂದಿ ಮತ್ತು ವೈದ್ಯಕೀಯ ಸೌಲಭ್ಯ ಪಡೆಯಲು ಎಷ್ಟು ಮಂದಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬುದನ್ನು ಪರಿಶೀಲಿಸಿ ಆಂಧ್ರಪ್ರದೇಶ ಮಾದರಿಯಲ್ಲಿ ಎರಡು ಮಾದರಿಯ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.
ಹೊಸದಾಗಿ ಬಿಪಿಎಲ್ ಕಾರ್ಡ್ ಮೂರು ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು ಸದ್ಯದಲ್ಲೇ ಎಲ್ಲಾ ಅರ್ಜಿ ಪರಿಶೀಲಿಸಿ ಅರ್ಹರಿಗೆ ಕಾರ್ಡ್ ವಿತರಿಸಲಾಗುವುದು ಎಂದು ಹೇಳಿದ್ದಾರೆ.