ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲಾಗಿದೆ. ಗೃಹಲಕ್ಷ್ಮಿ ಯೋಜನೆ ನೋಂದಣಿಗಾಗಿ ಇನ್ನು ಮೆಸೇಜ್ ಗಾಗಿ ಕಾಯಬೇಕಿಲ್ಲ. ನೇರವಾಗಿ ಅರ್ಹ ಫಲಾನುಭವಿಗಳು ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಹೇಳಿಕೆ ನೀಡಿದ್ದು, ಅರ್ಹ ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆ ನೋಂದಣಿಯನ್ನು ಮತ್ತಷ್ಟು ಸರಳಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ ಬಂದು ಅದರಲ್ಲಿ ದಿನಾಂಕ, ಸ್ಥಳ ಗಮನಿಸಿ ನೋಂದಣಿ ಕೇಂದ್ರಗಳಿಗೆ ತೆರಳಬೇಕಿತ್ತು. ಇನ್ನು ಎಸ್ಎಂಎಸ್ ಗಾಗಿ ಕಾಯಬೇಕಿಲ್ಲ. ಸಮೀಪದ ನೋಂದಣಿ ಕೇಂದ್ರಗಳಿಗೆ ತೆರಳಿ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಯೋಜನೆಯಡಿ ನೋಂದಣಿಗಾಗಿ ಯಾರಾದರೂ ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆಗೆ ನಿರ್ಲಕ್ಷ ತೋರಿದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.