ನವದೆಹಲಿ: ಜನಾಂಗೀಯ ಕಲಹ ಪೀಡಿತ ಮಣಿಪುರದ ದಿನಸಿ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಗಡಿ ಭದ್ರತಾ ಪಡೆಯ(ಬಿಎಸ್ಎಫ್) ಹೆಡ್ ಕಾನ್ಸ್ಟೆಬಲ್ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದ್ದು, ಆತನನ್ನು ಗಡಿ ಕಾವಲು ಪಡೆ ಅಮಾನತುಗೊಳಿಸಿದೆ. ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಅಂಗಡಿಯೊಳಗಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟವು. ಸಮವಸ್ತ್ರದಲ್ಲಿ ಮತ್ತು INSAS ರೈಫಲ್ ಅನ್ನು ಹೊತ್ತಿರುವ ವ್ಯಕ್ತಿಯನ್ನು ಹೆಡ್ ಕಾನ್ಸ್ಟೆಬಲ್ ಸತೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಆತ ಮಹಿಳೆಯನ್ನು ಹಿಡಿದಿಟ್ಟುಕೊಳ್ಳುತ್ತಾನೆ.
ಇಂಫಾಲ್ನಲ್ಲಿ ಜುಲೈ 20 ರಂದು ಪೆಟ್ರೋಲ್ ಪಂಪ್ ಬಳಿಯ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಹೆಡ್ ಕಾನ್ಸ್ಟೆಬಲ್ ಸತೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಬಿಎಸ್ಎಫ್ ದೂರು ಸ್ವೀಕರಿಸಿದ ನಂತರ ಆರೋಪಿಗಳ ವಿರುದ್ಧ ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ. ಅವರನ್ನು ನಿಕಟ ಬಂಧನದಲ್ಲಿ ಇರಿಸಲಾಗಿದೆ ಮತ್ತು ಅವರ ವಿರುದ್ಧ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವ ಮೊದಲು ಇಬ್ಬರು ಮಹಿಳೆಯರನ್ನು ರಾಜ್ಯದ ಥೌಬಲ್ ಜಿಲ್ಲೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮೇ ತಿಂಗಳ ಘಟನೆಯ ವಿಡಿಯೋ ಕಳೆದವಾರ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದಲ್ಲಿ ಇದುವರೆಗೆ 7 ಮಂದಿಯನ್ನು ಬಂಧಿಸಲಾಗಿದ್ದು, ಅವರಲ್ಲಿ ಒಬ್ಬ ಬಾಲಾಪರಾಧಿಯಾಗಿದ್ದಾನೆ.