ಕೊಲ್ಲಾಪುರ: ಪಶ್ಚಿಮ ಘಟ್ಟ, ಮಹಾರಾಷ್ಟ್ರ ಭಾಗದಲ್ಲಿ ಕೆಲದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕೊಲ್ಲಾಪುರದ ನರಸಿಂಹವಾಡಿ ಶ್ರೀಕ್ಷೇತ್ರದ ದತ್ತ ಮಂದಿರ ಸಂಪೂರ್ಣ ಜಲಾವೃತಗೊಂಡಿದ್ದು, ನೀರಿನಲ್ಲಿಯೇ ತೆರಳಿ ಭಕ್ತರು ದೇವರ ದರ್ಶನ ಪಡೆಯುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಇದನ್ನು ಭಕ್ತಿಯ ಪರಾಕಾಷ್ಠೆ ಎನ್ನಬೇಕೋ, ದುಸ್ಸಾಹಸ ಎನ್ನಬೇಕೊ ಗೊತ್ತಿಲ್ಲ… ಕೃಷ್ಣಾ ಹಾಗೂ ಪಂಚಗಂಗಾ ನದಿಯ ಅಬ್ಬರಕ್ಕೆ ಶ್ರೀ ಕ್ಷೇತ್ರ ದತ್ತ ಮಂದಿರ ಜಲಾವೃತಗೊಂಡಿದ್ದು, ಗರ್ಭಗುಡಿಗೆ ನೀರು ನುಗ್ಗಿದೆ. ದೇವಸ್ಥಾನದಲ್ಲಿ ಭಕ್ತರ ಕತ್ತಿನಮಟ್ಟಕ್ಕೆ ನೀರು ನಿಂತಿದೆ. ಆದರೂ ಅಪಾಯ ಲೆಕ್ಕಿಸದೇ ಸಾವಿರ ಸಾವಿರ ಸಂಖ್ಯೆಯ ಭಕ್ತರು ನೀರಿನಲ್ಲಿಯೇ ತೆರಳಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಒಂದೆಡೆ ಭಾರಿ ಮಳೆ.. ಮತ್ತೊಂದೆಡೆ ಪ್ರವಾಹದಂತೆ ಹರಿಯುತ್ತಿರುವ ನದಿಗಳು, ಬಹುತೆಕ ಮುಳುಗಡೆಯಾಗಿರುವ ಮಂದಿರ… ಆದರೂ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಮಾತ್ರ ತಗ್ಗಿಲ್ಲ. ಕತ್ತಿನವರೆಗೂ ನಿಂತಿರುವ ನದಿ ನೀರಲ್ಲಿ ತೆರಳುವ ಭಕ್ತರ ದುಸ್ಸಾಹಸಕ್ಕೆ ಕಡಿವಾಣಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.