ಪುಣೆ: ಎಸಿಪಿಯೊಬ್ಬರು ಪತ್ನಿ ಹಾಗೂ ಸೋದರಳಿಯನಿಗೆ ಗುಂಡಿಟ್ಟು ಹತ್ಯೆಗೈದು ಬಳಿಕ ತಾನು ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮೋನಿ ಗಾಯಕ್ವಾಡ್ (44) ಹಾಗೂ ದೀಪಕ್ (35) ಕೊಲೆಯಾದ ದುರ್ದೈವಿಗಳು. ಎಸಿಪಿ ಭರತ್ ಗಾಯಕ್ವಾಡ್, ಮುಂಜಾನೆ 3:30ರ ಸುಮಾರಿಗೆ ಪತ್ನಿಯ ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಗುಂಡಿನ ಶಬ್ಧ ಕೇಳಿ ರೂಮಿನಲ್ಲಿ ನಿದ್ದೆಗೆ ಜಾರಿದ್ದ ಭರತ್ ಗಾಯಕ್ವಾಡ್ ಮಗ ಹಾಗೂ ಸೋದರಳಿಯ ಎದ್ದು ಬಂದಿದ್ದಾರೆ. ಇದೇ ವೇಳೆ ಸೋದರಳಿಯ ದೀಪಕ್ ಮೇಲೂ ಫೈರಿಂಗ್ ಮಾಡಿದ್ದಾರೆ.
ಕೃತ್ಯದ ಬಳಿಕ ತಾನೂ ಅದೇ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ಮೂವರೂ ಸಾವನ್ನಪ್ಪಿದ್ದಾರೆ. ಪೊಲೀಸ್ ಅಧಿಕಾರಿ ಈ ರೀತಿ ಪತ್ನಿ, ಸೋದರಳಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ತಿಳಿದುಬಂದಿಲ್ಲ.
ಭರತ್ ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿತ್ತು. ಅವರು ತಮ್ಮ ಮನೆಗೆ ಬಂದಿದ್ದರು. ಈ ವೇಳೆ ಈ ಘಟನೆ ನಡೆದಿದ್ದು, ಯಾವ ಕಾರಣಕ್ಕಾಗಿ ಇಂತಹ ನಿರ್ಧಾರ ಕೈಗೊಂಡರು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.