ಬೆಳಗಾವಿ: ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರನ್ನು ಸಂಚಾರಿ ಪೊಲೀಸ್ ಕಾನ್ಸ್ ಟೇಬಲ್ ಓರ್ವರು ರಕ್ಷಿಸಿದ್ದು, ಪೊಲೀಸ್ ಸಿಬ್ಬಂದಿ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
44 ವರ್ಷದ ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬೆಳಗಾವಿ ಉತ್ತರ ಸಂಚಾರ ಠಾಣೆ ಪೊಲೀಸ್ ಕಾಶಿನಾಥ್, ಕೆರೆಗೆ ಹಾರಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಮಹಿಳೆ ಶಿವಲೀಲಾ ಪರ್ವತಗೌಡ್ರ, ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪಿ.ಸಿ ಕಾಶಿನಾಥ್ ಲೇಕ್ ವ್ಯೂ ಆಸ್ಪತ್ರೆ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು 5 ಅಡಿ ಎತ್ತರದ ಬ್ಯಾರಿಕೇಡ್ ಗಳ ಮೇಲೆ ನಿಂತು ಕೆರೆಗೆ ಜಿಗಿದ್ದಿದ್ದಾರೆ. ತಕ್ಷಣ ಕೆರೆಗೆ ಹಾರಿದ ಪಿಸಿ ಕಾಶಿನಾಥ್ ಮಹಿಳೆಯನ್ನು ರಕ್ಷಿಸಿದ್ದಾರೆ.
ಕಾನ್ಸ್ ಟೇಬಲ್ ಕಾಶಿನಾಥ್, ಈ ಹಿಂದೆ ಇದೇ ಸ್ಥಳದಲ್ಲಿ ಇಂತದ್ಧೇ ಎರಡು ಘಟನೆಗಳಲ್ಲಿ ಇಬ್ಬರ ಜೀವ ಉಳಿಸಿದ್ದರು. ಕಾಶಿನಾಥ್ ಕಾರ್ಯಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 5000 ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಪದಕಕ್ಕೂ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ. ಸಂಚಾರಿ ಪೊಲೀಸ್ ಕಾಶಿನಾಥ್ ಅವರ ಕಾರ್ಯಕ್ಕೆ ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.