ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ 2,000 ರೂ.ನೀಡುವ ಗೃಹಲಕ್ಷ್ಮೀ ಯೋಜನೆಗೆ ಇಂದೂ ಸರ್ವರ್ ಸಮಸ್ಯೆ ಶುರುವಾಗಿದ್ದು, ಅರ್ಜಿ ಸಲ್ಲಿಸಲು ಬಂದಿದ್ದ ಮಹಿಳೆಯರು ಪರದಾಟುವಂತಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಇಂದು ಬೆಳಗ್ಗೆಯಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಕ್ಯೂ ನಿಂತಿದ್ದು, ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಕಾಡುತ್ತಿದೆ. ಜೊತೆಗೆ 1908 ಸಹಾಯವಣಿ ಸಂಖ್ಯೆಯೂ ಕಾರ್ಯನಿರ್ವಹಿಸುತ್ತಿಲ್ಲ. ಅರ್ಜಿ ಸಲ್ಲಿಕೆ ವಿಳಂಬವಾಗುತ್ತಿರುವುದರಿಂದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗೃಹಲಕ್ಷ್ಮಿ’ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಸರ್ವರ್ ಸಮಸ್ಯೆ ಕಾಡಿದೆ. ಮೊಬೈಲ್ ಗಳಿಗೆ ಸಂದೇಶ ಬಾರದಿದ್ದರೂ ಬೆಂಗಳೂರು ಒನ್ ಕೇಂದ್ರಗಳಿಗೆ ಬಂದು ಮಹಿಳೆಯರು ಪರದಾಡಿದರು. ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳು, ಕರ್ನಾಟಕ ಒನ್ ಮತ್ತು ಗೃಹಲಕ್ಷ್ಮೀ ಯೋಜನೆ ನೊಂದಣಿ ಸೇವಾ ಕೇಂದ್ರಗಳಳಲ್ಲಿ ಅರ್ಜಿ ಸಲ್ಲಿಕೆಗೆ ಸರ್ವರ್ ಸಮಸ್ಯೆಯಾಗುತ್ತಿದ್ದು, ಮಹಿಳೆಯರು ಬೆಳಗ್ಗೆಯಿಂದ ಕಾದು ಕಾದು ಸಾಕಾಗಿದ್ದಾರೆ.
ಗೃಹಲಕ್ಷ್ಮೀ ಯೋಜನೆಗೆ ನಿನ್ನೆ ಒಂದೇ ದಿನ 7.77 ಲಕ್ಷ ಮಹಿಳೆಯರಿಂದ ನೋಂದಣಿ
ರಾಜ್ಯದಲ್ಲಿ ಎರಡನೇ ದಿನವಾದ ಶುಕ್ರವಾರ ಗೃಹಲಕ್ಷ್ಮೀ ಯೋಜನೆಗೆ ಬರೋಬ್ಬರಿ 7.77 ಲಕ್ಷ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನ ಕೇವಲ 60,000 ಮಂದಿ ಮಾತ್ರ ನೋಂದಣಿ ಮಾಡಿಸಿಕೊಂಡಿದ್ದರು. ಈ ಮೂಲಕ ಎರಡು ದಿನದಲ್ಲಿ ಒಟ್ಟಾರೆ 8.8 ಲಕ್ಷ ಮಹಿಳಯರು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ ಮೂಲಕ ಪಡಿತರ ಕಾರ್ಡ್ ಹೊಂದಿದ ಕುಟುಂಬದ ಯಜಮಾನಿಗೆ ರೂ.2,000/- ಹಣ ಜಮೆ ಮಾಡಲಾಗುತ್ತದೆ. ಗೃಹಲಕ್ಷ್ಮೀ ಯೋಜನೆಯು ಜುಲೈ 19 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಧೀಕೃತವಾಗಿ ಚಾಲನೆಗೊಂಡಿದೆ. ಪ್ರತಿ ಫಲಾನುಭವಿಯ ನೊಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು 1902 ಗೆ ಕಾಲ್ ಮಾಡಿ ಅಥವಾ 8147500500 ನಂಬರಗೆ ಎಸ್‍ಎಂಎಸ್ ಮೂಲಕ ಸಂದೇಶ ಕಳುಹಿಸಿ, ಮಾಹಿತಿ ಪಡೆಯಬಹುದು