ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ಹೊರಬಂದ ನಂತರ ಹಿಂಸಾಚಾರವನ್ನು ಖಂಡಿಸಿದ ಬಾಲಿವುಡ್ ಸೆಲೆಬ್ರಿಟಿಗಳನ್ನು ಮೇರಿ ಕೋಮ್ ನಟಿ ಲಿನ್ ಲೈಶ್ರಾಮ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೂಲತಃ ಮಣಿಪುರದವರಾದ ಲಿನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳನ್ನು ಖಂಡಿಸಿದ್ರು, ಕಳೆದ ಎರಡು ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದೆ ಎಂದು ಹೇಳಿದ್ದಾರೆ. ನಾವು ಕೂಗುತ್ತಾ ನಿಮ್ಮ ಸಹಾಯ ಕೇಳುತ್ತಿರುವಾಗ ನಿಮ್ಮ ಇನ್ಸ್ಟಾ ಸ್ಟೋರಿಗಳು ಮತ್ತು ಟ್ವೀಟ್ಗಳು ಎಲ್ಲಿದ್ದವು? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ನಟಿ ಮತ್ತು ಬಿಗ್ ಬಾಸ್ ಒಟಿಟಿ ಸ್ಪರ್ಧಿ ಉರ್ಫಿ ಜಾವೇದ್ ಅವರ ವಿಡಿಯೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ವಿರುದ್ಧವೂ ಲಿನ್ ವಾಗ್ದಾಳಿ ನಡೆಸಿದ್ರು. ಮಣಿಪುರ ಹಿಂಸಾಚಾರದ ಕಡೆಗೆ ಗಮನ ಸೆಳೆಯಲು ಉರ್ಫಿ ಇತ್ತೀಚಿಗೆ ಫಲಕವನ್ನು ಪ್ರದರ್ಶಿಸಿದ್ದರು. ಪೋಸ್ಟ್ ಅನ್ನು ಮರುಹಂಚಿಕೊಳ್ಳುತ್ತಾ, ಉರ್ಫಿ ಮತ್ತು ವೈರಲ್ ಭಯಾನಿ ಅವರನ್ನು ಟ್ಯಾಗ್ ಮಾಡಿದ್ದಾರೆ. ಹೆಚ್ಚು ಗಮನ ಸೆಳೆಯಲು ನೀವು ಕಂಡುಕೊಂಡ ಏಕೈಕ ಪೋಸ್ಟ್ ಐಡಿಯಾ ಇದಾಗಿದೆಯೇ? ಹಾಗಿದ್ದರೆ ನಿಲ್ಲಿಸಿ. ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬ ಯಾವ ಸುಳಿವು ನಿಮಗಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.
ಮಣಿಪುರದಲ್ಲಿ ಜನಸಮೂಹವೊಂದು ರಸ್ತೆಯಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಭಯಾನಕ ಮತ್ತು ಆಘಾತಕಾರಿ ವಿಡಿಯೋ ಹೊರಬಿದ್ದ ನಂತರ ಇದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಬಾಲಿವುಡ್ ನಟ ಅಕ್ಷಯ್ ಕುಮಾರ್, ಕಿಯಾರಾ ಅಡ್ವಾಣಿ, ರಿತೇಶ್ ದೇಶ್ಮುಖ್, ಕರೀನಾ ಕಪೂರ್ ಖಾನ್, ಸಂಜಯ್ ದತ್, ವಿವೇಕ್ ಅಗ್ನಿಹೋತ್ರಿ ಮತ್ತು ಇತರರು ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಇದನ್ನು ಖಂಡಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ನಡೆದ ಅಮಾನವೀಯ ಘಟನೆ ಇದಾಗಿದೆ. ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಲಾಗಿತ್ತು. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.