ಭಾರೀ ಮಳೆ ಸುರಿದ ಸಂದರ್ಭಗಳಲ್ಲಿ ನಗರಗಳಲ್ಲಿ ರಸ್ತೆ ಜಲಾವೃತಗೊಂಡು ಟ್ರಾಫಿಕ್‌ನಲ್ಲಿ ವಾಹನ ಸವಾರರು, ಪಾದಚಾರಿಗಳು ಸಿಲುಕಿಕೊಳ್ಳುವ ಸುದ್ದಿಗಳನ್ನು ನೀವೆಲ್ಲಾ ಓದಿರ್ತೀರಾ. ಆದ್ರೆ ಪುಣೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನ ನಿಗ್ಡಿ ಎಂಬ ಪ್ರದೇಶದ ಶಾಲೆಯೊಂದರ ಬಳಿ ಆರುವತ್ತೈದು ವರ್ಷ ವಯಸ್ಸಿನ ನೀಲಕಂಠ ಪಾಟೀಲ್ ಎಂಬವರು ನಡೆದುಕೊಂಡು ಹೋಗುತ್ತಿರುತ್ತಾರೆ. ಈ ಸಂದರ್ಭ ಕೆಸರು ಮಣ್ಣು ಇದ್ದ ಸ್ಥಳದಲ್ಲಿ ನೀಲಕಂಠ ಅವರು ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು ಅಗ್ನಿಶಾಮಕ ದಳದ ಅಧಿಕಾರಿ ಸಿಬ್ಬಂದಿಗಳು ಬಂದು ರಕ್ಷಣೆ ಮಾಡಿದ್ದಾರೆ.
ಪಾಟೀಲ್ ಅವರು ನಿಗ್ಡಿ ಪ್ರದೇಶದ ಶಾಲೆಯೊಂದರ ಬಳಿ ಶಾರ್ಟ್‌ಕಟ್ ದಾರಿಯಲ್ಲಿ ನಡೆದುಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಆದ್ರೆ ಕೆಸರು ಮಣ್ಣು ಇರುವ ಪ್ರದೇಶವನ್ನು ಗಮನಿಸದೆ ಸಂಕಷ್ಟಕ್ಕೆ ಸಿಲುಕ್ಕಿದ್ದರು. ನಡೆದುಕೊಂಡು ಹೋಗುತ್ತಿರುವಾಗಲೇ ಕೆಸರು ಮಣ್ಣಿನೊಳಗೆ ಹೂತು ಹೋಗಿದ್ದಾರೆ. ಸೊಂಟದ ಭಾಗದವರೆಗೂ ಹೂತು ಹೋಗಿದ್ದು ಇದನ್ನು ಸ್ಥಳೀಯ ಕೆಲ ನಿವಾಸಿಗಳು ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಏಣಿ ಮತ್ತು ಹಗ್ಗದ ಸಹಾಯದಿಂದ ರಕ್ಷಣೆ ಬೆಳಗ್ಗೆ ಸುಮಾರು 7:23 ಕ್ಕೆ ಅಗ್ನಿಶಾಮಕ ದಳಕ್ಕೆ ಸ್ಥಳೀಯ ನಿವಾಸಿಯೊಬ್ಬರು ಕರೆ ಮಾಡಿ ಈ ಅವಘಡದ ಮಾಹಿತಿ ನೀಡಿದ್ದಾರೆ. ತಕ್ಷಣಾ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಕೆಸರು ಮಣ್ಣಿನಲ್ಲಿ ಆಳವಾಗಿ ಸಿಲುಕಿಕೊಂಡ ನೀಲಕಂಠ ಅವರನ್ನು ಪತ್ತೆ ಮಾಡಿದ್ದಾರೆ. ಕ್ಷಿಪ್ರವಾಗಿ ಸ್ಪಂದಿಸಿದ ಸಿಬ್ಬಂದಿಗಳು ಏಣಿ ಮತ್ತು ಹಗ್ಗ ಬಳಸಿ ನೀಲಕಂಠ ಅವರು ಸಿಲುಕಿಕೊಂಡ ಸ್ಥಳಕ್ಕೆ ತಲುಪಿದ್ದಾರೆ. ಜಂಟಿ ಕಾರ್ಯಾಚರಣೆ ನಡೆಸಿ ಕೆಸರು ಮಣ್ಣಿನೊಳಗೆ ಹೂತು ಹೋಗಿದ್ದ ನೀಲಕಂಠ ಪಾಟೀಲರನ್ನು ಮೇಲಕೆತ್ತಿ ರಕ್ಷಿಸಿದ್ದಾರೆ.
https://twitter.com/i/status/1682390669904715776
