ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿದ್ದ ಜೆಡಿಎಸ್ ಹಿಂದೆ ಸರಿದಿದೆ. ಬಿಜೆಪಿ ಜೊತೆ ಮೈತ್ರಿಗೆ ಜೆಡಿಎಸ್ ನ ಹಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಎನ್ ಡಿ ಎ ಮೈತ್ರಿಕೂಟದಿಂದ ದೂರ ಉಳಿಯುವ ಬಗ್ಗೆ ಜೆಡಿಎಸ್ ತೀರ್ಮಾನಿಸಿದೆ ಎಂಬ ಮಾತು ಕೇಳಿಬಂದಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೈತ್ರಿ ಬಗ್ಗೆ ಯಾರೂ ಒಪ್ಪಿಗೆ ಸೂಚಿಸಿಲ್ಲ. ಇದರಿಂದಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು, ರಾಜಕೀಯ ಭವಿಷ್ಯದಿಂದ ಮೈತ್ರಿಗೆ ಮುಂದಾಗುವುದು ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಸ್ವತಂತ್ರವಾಗಿ ಚುನಾವಣೆಯಲ್ಲಿ ಹೋರಾಟ ಮಾಡುವ ಬಗ್ಗೆ ಚಿಂತನೆ ನಡೆಸೋಣ. ಎನ್ ಡಿ ಎ ಜೊತೆ ಮೈತ್ರಿಗೆ ಮುಂದಾದರೆ ಲೋಕಸಭಾ ಚುನಾವಣೆಯಲ್ಲಿ ಬೇರೆ ಸಂದೇಶ ರವಾನೆಯಾಗಲಿದೆ. ಮೈತ್ರಿಕೂಟ ಸೇರಿದರೆ ಕೆಲ ಸಮುದಾಯಗಳ ನೇರಾನೇರ ವಿರೋಧ ಎದುರಿಸಬೇಕಾಗುತ್ತದೆ. ಅದು ಸ್ಥಳೀಯವಾಗಿ ಪಕ್ಷ ಸಂಘಟನೆ ಮೇಲೆ ದುಷ್ಪರಿಣಾಮ ಬೀರಲಿದೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಲಿದೆ. ಹಾಗಾಗಿ ಮೈತ್ರಿ ನಿರ್ಧಾರದ ಬಗ್ಗೆ ಆತುರ ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಒಂದು ವೇಳೆ ಎನ್ ಡಿ ಎ ಜೊತೆ ಮೈತ್ರಿಗೆ ಮುಂದಾದರೆ ಕಾಂಗ್ರೆಸ್ ಅದನ್ನೇ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದ್ದು, ಹಳೆ ಮೈಸೂರು ಭಾಗದಲ್ಲಿ ಮತ್ತೆ ಜೆಡಿಎಸ್ ಗೆ ಹಿನ್ನಡೆಯಾಗಲಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.